ಚಿಕ್ಕಮಗಳೂರು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಆವರಣದಿಂದ ಇದೀಗ ಹುಟ್ಟೂರು ಚಟ್ಟನಹಳ್ಳಿಗೆ ಮೃತದೇಹ ರವಾನೆ ಮಾಡಲಾಗ್ತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಚೇತನಹಳ್ಳಿ ಎಸ್ಟೇಟ್ ನಲ್ಲಿ ಉದ್ಯಮಿ ಸಿದ್ಧಾರ್ಥ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಹಿರಿಯ ಪುತ್ರ ಅಮರ್ತ್ಯ ಸಿದ್ಧಾರ್ಥ್ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದು, ಕಿರಿಯ ಪುತ್ರ ಇಶಾನ್ ಅಣ್ಣನೊಂದಿಗೆ ಕೈಜೋಡಿಸಲಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿರೋ ಅಂತ್ಯಕ್ರಿಯೆಗೆ ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಶ್ರೀಗಂಧ, ಮಾವು, ಹಲಸು, ಗರಿಕೆ ಸೇರಿದಂತೆ ಸಿದ್ಧಾರ್ಥ್ ರವರ ಎಸ್ಟೇಟ್ ನಲ್ಲೇ ಬೆಳೆದ ನಾನಾ ಮರಗಳಿಂದ ಸಿದ್ಧಾರ್ಥ್ ಚಿತೆಯನ್ನು ತಯಾರಿಸಲಾಗಿದೆ.
ಸಿದ್ಧಾರ್ಥ್ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು ಕಂಬನಿ ಮಿಡಿದಿದ್ದಾರೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು ಕಾಫಿ ಕಿಂಗ್ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ.