ಬೆಂಗಳೂರು: ಬಹುಮತವಿಲ್ಲದಿದ್ದರೂ ಅಧಿಕಾರದ ಖುರ್ಚಿಗೆ ಅಂಟಿಕೊಂಡು ಕುಳಿತಿದ್ದ ಮೈತ್ರಿ ಸರ್ಕಾರ ಇಂದು ಪತನವಾಗಿದ್ದು ರಾಜ್ಯಕ್ಕೆ ಅಂಟಿದ್ದ ಗ್ರಹಣ ಬಿಟ್ಟು ಹೋಗಿದೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಆರ್.ಅಶೋಕ್, ಬಹುಮತವಿಲ್ಲದಿದ್ರೂ ಅಧಿಕಾರದ ಖುರ್ಚಿಗೆ ಅಂಟುಕೊಂಡಿದ್ದ ಸರ್ಕಾರ ಬಿದ್ದು ಹೋಗಿದೆ. ಈ ಮೂಲಕ ರಾಜ್ಯಕ್ಕೆ ಅಂಟಿದ್ದ ಗ್ರಹಣ ಬಿಟ್ಟು ಹೋಗಿದೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಬಿಜೆಪಿ ಪ್ರಯತ್ನ ಮಾಡುತ್ತೆ ಎಂದರು. ಇನ್ನು ಸರ್ಕಾರ ಪತನವಾಗಲು ಅವರೇ ಕಾರಣ, ರಾಜ್ಯದಲ್ಲಿ ಇಷ್ಟು ದಿವಸ ಆಡಳಿತದಲ್ಲಿದ್ದ ದೋಸ್ತಿ ಸರ್ಕಾರಕ್ಕೆ ಜನಾದೇಶವೇ ಇರಲಿಲ್ಲ, ಅವರ ಒಳಜಗಳಗಳಿಂದ ಎಂಎಲ್ ಎಗಳಿಗೆ ಅನುದಾನ ನೀಡದೆ ಶಾಸಕರನ್ನು ಕಡೆಗಣಿಸಿ ಅವರ ವಿಶ್ವಾಸ ಕೆಡಿಸಿಕೊಂಡರು. ಅವರ ಕರ್ಮ ಕಾಂಡದಿಂದಲೇ ಈ ಸ್ಥಿತಿ ಬಂದೊದಗಿದೆ ಅಂತ ಇದೇ ವೇಳೆ ಆರ್. ಆಶೋಕ್ ಲೇವಡಿ ಮಾಡಿದ್ರು.
ಇನ್ನು ಅತೃಪ್ತ ಶಾಸಕರು ಬಿಜೆಪಿ ಸೇರ್ಪಡೆಗೊಳ್ಳುತ್ತಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್ ಕಾಂಗ್ರೆಸ್ ನವರು ಅತೃಪ್ತರು ರಾಜೀನಾಮೆ ನೀಡಿಲ್ಲ. ಅವರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಮಾತನಾಡಿಸೂ ಇಲ್ಲ. ಆದರೆ ಪಕ್ಷೇತರರು ಮಾತ್ರ ನಮ್ಮೊಂದಿಗೆ ಇಲ್ಲೇ ಇದ್ದಾರೆ ಎಂದರು. ಸರ್ಕಾರ ರಚನೆ ಕುರಿತಾಗಿ ಬಿಜೆಪಿ ರಾಜ್ಯಪಾಲರ ಎದುರು ಹಕ್ಕು ಮಂಡನೆ ಮಾಡಲಿದ್ದು ಸರ್ಕಾರ ರಚನೆಗೆ ಸಿದ್ಧತೆ ನೆಡಸುತ್ತೇವೆ ಅಂತ ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್. ಆಶೋಕ್ ಇದೇ ವೇಳೆ ಮಾಹಿತಿ ನೀಡಿದ್ರು.