ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿರುವ ಬಿ.ಎಸ್ ಯಡ್ಯೂರಪ್ಪನವರನ್ನು ಭೇಟಿಯಾಗಿ ಶುಭಾಶಯ ಕೋರಲು ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ತಾವು ಹೋದಲ್ಲೆಲ್ಲಾ ಕಾರ್ಯಕರ್ತರು ನೂತನ ಸಿಎಂಗೆ ಹೂಗುಚ್ಚ, ಹಾರ ತುರಾಯಿ ಮತ್ತಿತರ ವಸ್ತುಗಳನ್ನು ನೀಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಬಿಎಸ್ವೈ ಇಂಥಹ ವಸ್ತುಗಳನ್ನು ಖರೀದಿಸೋ ಮೂಲಕ ವೃಥಾ ಹಣ ವ್ಯಯಿಸಬೇಡಿ ಅಂತ ಮನವಿ ಮಾಡಿದ್ದಾರೆ.
ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ್ ಯಡ್ಯೂರಪ್ಪನವರ ವರ್ಚಸ್ಸು ಮತ್ತಷ್ಟು ಹೆಚ್ಚಿದೆ. ಅಧಿಕಾರದ ಗದ್ದುಗೆಗೇರುತ್ತಿದ್ದಂತೆ ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಸಿಎಂ ಬಿಎಸ್ವೈ ರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿಜೆಪಿಯ ಬೆಂಗಳೂರಿನ ಕೇಂದ್ರ ಕಚೇರಿ, ತಮ್ಮ ನಿವಾಸ ದವಳಗಿರಿ, ವಿಧಾನಸೌಧದ ತಮ್ಮ ಕಚೇರಿ, ಹೀಗೆ ಬಿಎಸ್ವೈ ಹೋದಲ್ಲೆಲ್ಲಾ ಅವರಿಗೆ ಹೂಗುಚ್ಚ, ಹಾರ, ಶಾಲು ಇತ್ಯಾದಿಗಳನ್ನು ನೀಡುವ ಮೂಲಕ ಶುಭಾಶಯ ಕೋರುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರೋ ಮುಖ್ಯಮಂತ್ರಿ ಯಡ್ಯೂರಪ್ಪ, ನನ್ನನ್ನು ಭೇಟಿ ಮಾಡಿ ಶುಭಕೋರಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಇಂತಹ ಸಂದರ್ಭದಲ್ಲಿ ನೀವುಗಳು ಹೂಗುಚ್ಚ, ಹಾರ, ಶಾಲುಗಳನ್ನು ತರುವ ಮೂಲಕ ವೆಚ್ಚ ಮಾಡುವುದು ಬೇಡ. ನಿಮ್ಮ ಹಾರೈಕೆಯೇ ನನಗೆ ಬಹುದೊಡ್ಡ ಉಡುಗೊರೆ ದಯವಿಟ್ಟು ಸಹಕರಿಸಿ ಅಂತ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.