Saturday, July 27, 2024

Latest Posts

ಮಂಡ್ಯದ ಕಾಮೇಗೌಡರ ಸಾಧನೆಗೆ ಮೋದಿ ಬಿಗ್ ಸೆಲ್ಯೂಟ್..!

- Advertisement -

ಮಂಡ್ಯ ಅಂದ್ರೆ ಇಂಡಿಯಾ ಅನ್ನೋ ಮಾತಿದೆ. ಮಂಡ್ಯದ ಗಂಡು ದಿಲ್ಲಿ ಸರ್ಕಾರದಲ್ಲಿ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ರು. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬೀಸಾಕಿ ಬರೋ ಗಂಡೆದೆ ಮಂಡ್ಯದ ಮಂದಿಗಷ್ಟೇ ಇರುತ್ತೆ. ರೆಬೆಲ್ ಸ್ಟಾರ್ ಅಂಬರೀಷ್ ನಡೆಯನ್ನು ಕಂಡು ದೇಶದ ದೈತ್ಯ ರಾಜಕಾರಣಿಗಳೇ ಯಾರಪ್ಪಾ ಈ ಗಂಡು ಅಂತ ತಲೆ ಕೆಡೆಸಿಕೊಂಡಿದ್ರು. ಅವತ್ತಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಹ ಮನವೊಲಿಸೋ ಪ್ರಯತ್ನ ಮಾಡಿದ್ರು. 12 ವರ್ಷಗಳ ಬಳಿಕ ಖುದ್ದು ಪ್ರಧಾನಿ ಮೋದಿ ಮತ್ತೊಬ್ಬ ಮಂಡ್ಯದ ಗಂಡಿನ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ಆ ಮತ್ತೊಬ್ಬ ಮಂಡ್ಯದ ಗಂಡು ಯಾರು ಅಂತೀರಾ? ಅವರೇ ಕಾಮೇಗೌಡರು.

ನಮ್ಮ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಮಾತಾಡಿದ್ದಾರೆ. ಮನ್ ಕೀ ಬಾತ್್ನಲ್ಲಿ ಮಂಡ್ಯದ ಈ ಭಗೀರಥನನ್ನು ಹಾಡಿ ಹೊಗಳಿಸಿದ್ದಾರೆ. ಅಂಬರೀಷ್ ಏನೋ ಕೇಂದ್ರ ಸಚಿವರಾಗಿದ್ರು, ಹಾಗಾಗಿ ದಿಲ್ಲಿ ಸರ್ಕಾರ ಮಾತಾಡಿಕೊಂಡಿತ್ತು. ಆದ್ರೆ, ಸಾಮಾನ್ಯ ಕುರಿಗಾಹಿಯಾಗಿರೋ ಕಾಮೇಗೌಡರ ಬಗ್ಗೆ ಮೋದಿ ಮಾತಾಡಿದ್ದೇಕೆ? ಮೋದಿ ಕಾಮೇಗೌಡರನನ್ನ ಹಾಡಿ ಹೊಗಳಿದ್ದೇಕೆ ಗೊತ್ತಾ? ಕಲ್ಮನೆ ಕಾಮೇಗೌಡರ ಅಸಲಿ ಕಥೆಯನ್ನೇ ತೋರಿಸ್ತೀವಿ, ನೋಡಿ.

2000 ಮರಗಳ ನಾಲ್ಕು ಕೆರೆಗಳ ಒಡೆಯ ಕಾಮೇಗೌಡ


ದಾಸರದೊಡ್ಡಿಯ ನೀಲಿ ವೆಂಕಟಗೌಡ ಹಾಗೂ ರಾಜಮ್ಮ ದಂಪತಿಗಳ ಹತ್ತನೇ ಪುತ್ರ ಕಲ್ಮನೆ ಕಾಮೇಗೌಡರು. ಒಂದೇ ಒಂದು ಅಕ್ಷರವನ್ನೂ ಓದದೆ ಈ ಪುಣ್ಯಾತ್ಮ ಮಹಾ ಯುನಿವರ್ಸಿಟಿಯಲ್ಲಿ ಯಾರೂ ಕಲಿಯದ ಪಾಠ ಕಲಿತಿದ್ದಾರೆ. ಪ್ರಕೃತಿಯ ಮಾತೆಯ ಮುದ್ದಿನ ಮಗನಿಗೆ ಪ್ರಕೃತಿಯೇ ವಿಶ್ವವಿದ್ಯಾಲಯ. ಪ್ರಕೃತಿಯೇ ಸರಸ್ವತಿ. ಪ್ರಕೃತಿಯೇ ಲಕ್ಷ್ಮೀ. ಅತ್ತ ಕಡುಬಡವರೂ ಅಲ್ಲದ, ಮಧ್ಯಮ ವರ್ಗಕ್ಕೂ ಸಲ್ಲದ ಮಧ್ಯೆಯಿದ್ದ ಕುಟುಂಬದ ಕಲ್ಮನೆ ಕಾಮೇಗೌಡರಿಗೆ ಚಿಕ್ಕ ಮನೆಯಿದೆ. ಒಂದುದಿನದ ಬಿತ್ತನೆಗಾಗುವಷ್ಟು ಭೂಮಿ, ಒಂದಷ್ಟು ಕುರಿಗಳು ಇದಷ್ಟೇ ಅವರ ಆಸ್ತಿ. 40 ವರ್ಷಗಳಲ್ಲಿ 2000 ಮರಗಳನ್ನು ಬೆಳೆಸಿದ್ದಾರೆ. 14 ಕೆರೆಗಳನ್ನು ನಿರ್ಮಿಸಿದ್ದಾರೆ. ಕಾಮೇಗೌಡರ ಅಸಲಿ ಆಸ್ತಿ ಇವೇ ನೋಡಿ.

40 ವರ್ಷಗಳ ಕಾಮೇಗೌಡರ ಮಹಾತಪಸ್ಸು


ಸುಮಾರು 40 ವರ್ಷದ ಹಿಂದೆ ತಮ್ಮ ಮನೆ ಸಮೀಪವಿದ್ದ ಕುಂದೂರು ಬೆಟ್ಟ ಬಹುತೇಕ ಬಂಜರಾಗಿ ಅಲ್ಲಲ್ಲಿ ಒಣ ಪೊದೆಗಳನ್ನು ಬಿಟ್ಟರೆ ಬೇರೇನೂ ಇಲ್ಲದ ಜಾಗವೊಂದು ಕಾಮೇಗೌಡರ ಗಮನ ಸೆಳೆದಿತ್ತು. ಬೆಟ್ಟದ ಮೇಲೆ ಕುರಿ ಮೇಯಿಸಲು ಹೋದಾಗ ಅಲ್ಲಿ ಕುರಿಗಳು ನೀರಿನ ಸೆಲೆ ಇಲ್ಲದ ಕಾರಣ ಕಷ್ಟಪಡುವುದನ್ನು ಅರಿತರು. ಬೆಟ್ಟದಲ್ಲಿ ವಾಸಿಸುತ್ತಿದ್ದ ಹಕ್ಕಿಗಳಿಗಾಗಲಿ, ಇತರೆ ಜೀವಿಗಳಿಗಾಗಲಿ ಸರಿಯಾದ ನೀರಿನ ಒರತೆ ಇರಲಿಲ್ಲ. ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದರೂ ಬೆಟ್ಟದ ಇಳಿಜಾರಿನ ಪ್ರದೇಶಗಳಲಿ ಅದೆಲ್ಲ ಹರಿದು ಹೋಗಿ ಬಿಡುತ್ತಿತ್ತು. ಬೆಟ್ಟದ ಮೇಲೆ ಹೆಚ್ಚು ನೀರು ನಿಲ್ಲುತ್ತಿರಲಿಲ್ಲ, ಅಲ್ಲಿನ ನೆಲ ಹೆಚ್ಚು ನೀರನ್ನು ಇಂಗಿಸಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಕಾಮೇಗೌಡರಿಗೆ ತಾವೇ ಏಕೆ ಈ ಬೆಟ್ಟದಲ್ಲಿ ಕೆರೆಗಳನ್ನು ನಿರ್ಮಿಸಬಾರದೆನ್ನುವ ಆಲೋಚನೆ ಹೊಳೆದಿತ್ತು. ಹರಿದು ಹೋಗುತ್ತಿದ್ದ ನೀರಿಗೆ ತಡೆಯೊಡ್ಡೆ ಕೆಲಸಕ್ಕೆ ಮುಂದಾದ್ರು ಕಾಮೇಗೌಡ್ರು. ಈ ವೇಳೆ ಕಾಮೇಗೌಡರನ್ನು ಜನ ಹುಚ್ಚ ಅಂತ ಕರೆದಿದ್ರು.

ಮರಗಳೇ ಮಕ್ಕಳು.. ಕೆರೆಗಳೇ ಮೊಮ್ಮಕ್ಕಳು


ಸುಮಾರು 40 ವರ್ಷಗಳ ಹಿಂದೆ ತಮ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ತೊಡಗಿದ ಕಾಮೇಗೌಡರು ಇದುವರೆಗೆ ಸುಮಾರು 14-15 ಕೆರೆಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು ಯಾವ ಸರ್ಕಾರಿ ಯೋಜನೆಯ ನೆರವು ಬಯಸಲಿಲ್ಲ. ಅಲ್ಲದೆ ಇದಕ್ಕಾಗಿ 10-15 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದ್ದಾರೆ.ಇದೀಗ 14 ಕೆರೆಗಳನ್ನು ನಿರ್ವಹಿಸುತ್ತಿರುಅವ್ ಕಾಮೇಗೌಡರು ಕೆಲ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಹೆಸರನ್ನು ಇರಿಸಿದ್ದಾರೆ. ಕಾಮೇಗೌಡರ ಈ ಕಾಯಕನಿಷ್ಠೆ ಯಾವ ಪ್ರಮಾಣದ್ದೆಂದರೆ ತಮಗೆ ಸಂದ ಅನೇಕ ಬಹುಮಾನ ರೂಪದ ಹಣವನ್ನು ಸಹ ಅವರು ಈ ಕೆರೆಗಳ ನಿರ್ಮಾಣ, ನಿರ್ವಹಣೆಗಾಗಿಯೇ ಬಳಸಿದ್ದಾರೆ, ಬಳಸುತ್ತಿದ್ದಾರೆ.

ವಿವಿಎಸ್ ಲಕ್ಷ್ಮಣ ಬಾಯಲ್ಲೂ ಕಾಮೇಗೌಡರು


ಟೀಂ ಇಂಡಿಯಾದ ಮಾಜಿ ಆಟಗಾರ, ಸ್ಟೈಲಿಶ್ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಎರಡು ವರ್ಷಗಳ ಹಿಂದೆ ಹಾಡಿ ಹೊಗಳಿ ಟ್ವೀಟ್ ಮಾಡಿದ್ರು. ಸಾಮಾಜಿಕ ಕಾರ್ಯದಲ್ಲಿ ತೊಡಗಿದವರನ್ನು ಗುರುತಿಸಿ ಬೆನ್ನುತಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿರುವ ಲಕ್ಷ್ಮಣ್ ಅವರು ಕನ್ನಡಿಗ ಕೆರೆ ಕಾಮೇಗೌಡರ ಬಗ್ಗೆ ಬರೆದಿದ್ರು. 82 ವರ್ಷದ ಕಾಮೇಗೌಡ ಅವರು ಸುಮಾರು 14 ಕೆರೆಗಳನ್ನು ನಿರ್ಮಿಸಿ, ಬೇಸಿಗೆಯಲ್ಲೂ ಅದರಲ್ಲಿ ನೀರು ಉಳಿಯುವ ಹಾಗೇ ನೋಡಿಕೊಳ್ಳುತ್ತಿದ್ದಾರೆ. ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕೆರೆಗಳ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಶಸ್ತಿಗಳಿಂದ ಬಂದ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸುತ್ತಿರುವ ಅವರಿಗೆ ಪ್ರಣಾಮಗಳು ಎಂದು ಅಭಿನಂದನೆ ಸಲ್ಲಿಸಿದ್ರು.

ಪ್ರಶಸ್ತಿ ಹಣವನ್ನೂ ಕೆರೆ ನಿರ್ಮಾಣಕ್ಕಾಗಿ ಬಳಸಿದ್ರು..!


ಈ ಕೆರೆಗಳ ನಿರ್ಮಾಣಕ್ಕೆ ತಗಲಿರುವ ಒಟ್ಟು ವೆಚ್ಚ ಆರು ಲಕ್ಷ ರೂಪಾಯಿ. ತಾವು ಉಳಿಸಿದ, ಕುರಿ ಮಾರಿದ ಹಣ ಖರ್ಚು ಮಾಡಿದ ಮೇಲೂ ಒಂದಿಷ್ಟು ಸಾಲವೂ ಇದೆ. ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪಡೆದಿರೋ ಕಾಮೇಗೌಡರು ಪ್ರಶಸ್ತಿಯ ಹಣವನ್ನೂ ಕೆರೆ ನಿರ್ಮಾಣಕ್ಕೆ ಮೀಸಲಿಡುತ್ತಿದ್ದಾರೆ. ಸ್ವಾರ್ಥಿಗಳೇ ತುಂಬಿರೋ ಈ ಜಗತ್ತಿನಲ್ಲಿ ಕಾಮೇಗೌಡರ ಶ್ರಮ ಬೆವರೂ ಸಹ ಎಷ್ಟೋ ಜೀವಕ್ಕೆ ಆಸರೆಯಾಗುತ್ತಿದೆ. ಇಂಥಾ ಮಹಾನ್ ಸಾಧಕನ ಬಗ್ಗೆಯೇ ಪ್ರಧಾನಿ ಮೋದಿ ಹಾಡಿ ಹೊಗಳಿದ್ದು. ಇಂಥಾ ಮಾಡರ್ನ್ ಭಗೀರಥ ಮಂಡ್ಯದವರು ಅನ್ನೋದು ಮಂಡ್ಯದ ಮಂದಿಗೆ ಹೆಮ್ಮೆಯ ವಿಚಾರವಾಗಿದೆ. ಕರ್ನಾಟಕ ಟಿವಿ ಕಲ್ಮನೆ ಕಾಮೇಗೌಡರನ್ನು ಅಭಿನಂದಿಸುತ್ತದೆ.

ಕರ್ನಾಟಕ ಟಿವಿ, ಮಳವಳ್ಳಿ

- Advertisement -

Latest Posts

Don't Miss