ಬೆಂಗಳೂರು: ಸದನಕ್ಕೆ ಹಾಜರಾಗದ ಸದಸ್ಯರ ಕುರಿತ ಚರ್ಚೆ ವೇಳೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಬಂದಿರುವ ಈ ಪರಿಸ್ಥಿತಿ ಭಾರತ ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ಯಾವ ಸ್ಪೀಕರ್ ಗೂ ಬಂದಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ನ ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ಗೈರು ಹಾಜರಿ ಕುರಿತು ಸಚಿವ ಕೃಷ್ಣ ಭೈರೇಗೌಡ ಆರೋಪ ಮಾಡಿದ್ರು, ಅಲ್ಲದೆ ಆಪರೇಷನ್ ಕಮಲಕ್ಕೆ ಒಳಪಟ್ಟಿದ್ದಾರೆ ಎನ್ನಲಾಗಿರುವ ಬಗ್ಗೆ ಫೋನ್ ಸಂಭಾಷಣೆಯ ಆಡಿಯೋ ಬಗ್ಗೆ ವಿಸೃತವಾಗಿ ಮಾತನಾಡುತ್ತಿದ್ದರು ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದ್ರು. ಈ ವೇಳೆ ಉಭಯ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಈ ವೇಳೆ ಮಾತನಾಡಿದ ಸ್ಪೀಕರ್ ಬಹುಶಃ ಯಾವ ಸಭಾಧ್ಯಕ್ಷರಿಗೂ ಭಾರತ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ನನಗೆ ಬಂದಿರುವ ದಯನೀಯ ಸ್ಥಿತಿ ಬಂದಿರಲು ಸಾಧ್ಯವಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಚುನಾಯಿತ ಸದಸ್ಯರು ಸಭೆಗೆ ಬರೋದಿಲ್ಲ, ಮತ್ತೊಬ್ಬರು ಸದಸ್ಯರು ಅವರ ಮೇಲೆ ಮಾಡೋ ಆರೋಪಕ್ಕೆ ಸಮರ್ಥನೆ ನೀಡಲು ಅವರೇ ಇರೋದಿಲ್ಲ. ಇದೆಲ್ಲಾ ಕಡತಕ್ಕೆ ಹೋಗುತ್ತೆ. ಇಷ್ಟ ಪಟ್ಟು ಚುನಾಯಿಸಿದ್ದ ಜನ ಅನಾಥರಾಗ್ತಾರಲ್ಲ, ಇಡೀ ಪ್ರಜಾತಂತ್ರ ಅನಾಥವಾಗುತ್ತಲ್ಲ, ಎಲ್ಲಿಗೆ ಹೋಗಿ ತಲುಪುತ್ತೇವೆ ಅನ್ನೋದು ನನ್ನ ಕಳಕಳಿ. ನಾವು ಇಂದು ಇರ್ತೇವೆ, ನಾಳೆ ಹೊರಟು ಹೋಗ್ತೇವೆ. ಆದ್ರೆ ನಾವೇನು ದಾಖಲೆ ಬಿಟ್ಟು ಹೋಗ್ತಿವಿ ಅಂತ ಪ್ರಶ್ನಿಸಿದ ಸ್ಪೀಕರ್, ಇದು ನಮಗ್ಯಾರಿಗೂ ಗೌರವ ತರುವುದಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ರು.