ಬೆಂಗಳೂರು: ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಲು ಕಳೆದ ವಾರದಿಂದ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಸ್ಪೀಕರ್ ರಮೇಶ್ ಕುಮಾರ್, ಇಂದೇನಾದರೂ ಒಂದು ವೇಳೆ ಮತ್ತೆ ಮುಂದೂಡಿಕೆಯಾದಲ್ಲಿ ರಾಜೀನಾಮೆ ನೀಡೋದಾಗಿ ನಿರ್ಧಾರ ಮಾಡಿದ್ದರಂತೆ. ಈ ವಿಷಯವನ್ನು ಸ್ವತಃ ಸ್ಪೀಕರ್ ಸದನದಲ್ಲಿ ಹೇಳಿದ್ದಾರೆ.
ಅತೃಪ್ತ ಶಾಸಕರ ಕುರಿತು ಸದನದಲ್ಲಿ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಭೈರೇಗೌಡ, ಅತೃಪ್ತ ಶಾಸಕರು ಸ್ಪೀಕರ್ ಮೇಲೆ ಸುಪ್ರೀಂಕೋರ್ಟ್ ನಲ್ಲಿ ಮಾಡಿದ್ದ ಆರೋಪಗಳ ಬಗ್ಗೆ ಪ್ರಸ್ತಾಪಿಸಿದ್ರು. ಅತೃಪ್ತ ಶಾಸಕರು ರಾಜೀನಾಮೆ ನೀಡಲು ಬಂದಾಗ ಸ್ಪೀಕರ್ ಹಿಂಬಾಗಿಲಿನಿಂದ ಪಲಾಯನವಾಗಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಕೈಗೆ ಸಿಗದಂತೆ ತಪ್ಪಿಸಿಕೊಂಡಿದ್ದಾರೆ ಅಂತ ಆರೋಪ ಮಾಡಿದ್ದಾರೆ ಅಂತ ಪ್ರಸ್ತಾಪ ಮಾಡುತ್ತಿದ್ದಂತೆ ಸ್ಪೀಕರ್ ಗರಂ ಆದರು. ತಮ್ಮ ರಾಜೀನಾಮೆ ಪತ್ರವನ್ನು ಕ್ರಮಬದ್ಧವಾಗಿ ಬರೆಯಲು ತಿಳಿಯದವರೆಲ್ಲಾ ಸ್ಪೀಕರ್ ಬಗ್ಗೆ ಮಾತನಾಡುತ್ತಾರೆ ಅಂತ ಕಿಡಿ ಕಾರಿದ್ರು.
ಬಳಿಕ ಮಾತನಾಡಿದ ಸ್ಪೀಕರ್ ನಾನು ಇಂದು ವಿಶ್ವಾಸಮತ ಯಾಚನೆ ಒಂದು ವೇಳೆ ಮತ್ತೆ ಮುಂದೂಡಿಕೆಯಾಗಿದ್ದರೆ ರಾಜೀನಾಮೆ ನೀಡಲು ತಯಾರಾಗಿ ಬಂದಿದ್ದೆ. ಬೇಕಿದ್ದರೆ ನೋಡಿ ನಾನು ರಾಜೀನಾಮೆ ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಬಂದಿದ್ದೆ ಅಂತ ಸ್ಪೀಕರ್ ಹೇಳಿದ್ರು.