ನವದೆಹಲಿ: ವಾಹನಗಳ ಮೇಲೆ ತಮ್ಮ ಇಷ್ಟಪಟ್ಟವರ ಹೆಸರು, ನಟರ ಚಿತ್ರ, ತಂದೆ ತಾಯಿಯ ಆಶೀರ್ವಾದ, ದೇವರ ಕೃಪೆ ಎಂಬಿತ್ಯಾದಿ ಸ್ಟಿಕ್ಕರ್ ಗಳನ್ನು ಅಂಟಿಸಿಕೊಂಡಿರೋದನ್ನು ನೋಡಿದ್ದೇವೆ. ಕೆಲವರೊಂತೂ ಇಡೀ ಕುಟುಂಬದ ಹೆಸರುಗಳನ್ನೇ ಸಾಲು ಸಾಲಾಗಿ ಬರೆಸಿಕೊಂಡಿರ್ತಾರೆ. ಇನ್ನೂ ಕೆಲವರು ತಮ್ಮ ಕಾಲೆಯುವವರಿಗೆ ಹಿತ ಶತ್ರುಗಳ ಆಶೀರ್ವಾದ ಅಂತೆಲ್ಲಾ ಸ್ಟಿಕ್ಕರ್ ಅಂಟಿಸಿಕೊಳ್ಳೋ ಮೂಲಕ ಅವರಿಗೆ ಚಿವುಟುವ ಯತ್ನ ಮಾಡ್ತಾರೆ. ಆದ್ರೆ ದೆಹಲಿಯ ಶಾಸಕರೊಬ್ಬರು ಕಾರಿನ ಮೇಲೆ ‘SON OF MLA’ (ಎಂಎಲ್ ಎ ಮಗ) ಅಂತ ಅಂಟಿಸಲಾಗಿದ್ದ ಸ್ಟಿಕ್ಕರ್ ಬಗ್ಗೆ ಟ್ವೀಟ್ ಮಾಡೋ ಮೂಲಕ ಇದೀಗ ಸಂಕಷ್ಟಕ್ಕೀಡಾಗಿದ್ದಾರೆ.
ಹೌದು, ದೆಹಲಿಯ ರಸ್ತೆ ಮೇಲೆ ‘SON OF MLA’ ಅಂತ ಬರೆಯಲಾಗಿದ್ದ ಕಾರಿನ ಫೋಟೋ ತೆಗೆದ ಬಿಜೆಪಿ ಶಾಸಕ ಮಂಜಿಂದರ್ ಸಿರ್ಸಾ ಅದನ್ನು ಟ್ವೀಟ್ ಮಾಡಿದ್ದರು. ಅಲ್ಲದೆ ಆ ಕಾರು ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಪುತ್ರನಿಗೆ ಸೇರಿದ್ದು ಅಂತಲೂ ಬರೆದಿದ್ದರು. ಇನ್ನು ಬಿಜೆಪಿ ಶಾಸಕನ ಈ ಟ್ವೀಟ್ ಸ್ಪೀಕರ್ ಗೋಯಲ್ ರ ಕೆಂಗಣ್ಣಿಗೆ ಗುರಿಯಾಯ್ತು. ಅದು ನನ್ನ ಪುತ್ರನಿಗೆ ಸೇರಿದ ಕಾರಲ್ಲ. ನನ್ನ ತೇಜೋವಧೆಗಾಗಿ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಲಾಗಿದೆ ಅಂತ ಆರೋಪಿಸಿರೋ ಸ್ಪೀಕರ್ ಗೋಯಲ್, ಈ ಕುರಿತು 7 ದಿನಗಳೊಳಗಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಅಂತ ಬಿಜೆಪಿ ಶಾಸಕ ಸಿರ್ಸಾಗೆ ನೋಟೀಸ್ ನೀಡಿದ್ದಾರೆ.