ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸುಮಾರು ಅರ್ಧ ಶತಮಾನದ ಕನಸನ್ನ, ನನಸಾಗಿಸಿಕೊಂಡಿದೆ. ಸದ್ಯ ದೇಶಕ್ಕೆ ದೇಶವೇ ಐತಿಹಾಸಿಕ ಗೆಲುವಿನ ಖುಷಿಯಲ್ಲಿದೆ. ಈ ನಡುವೆ ಮನೆಯಲ್ಲಿ ಕುಳಿತು ವಿಶ್ವಕಪ್ ಫೈನಲ್ ವೀಕ್ಷಿಸುತ್ತಿದ್ದ ಅಜ್ಜಿ ಒಬ್ಬರು, ಫುಲ್ ಫೇಮಸ್ ಆಗಿದ್ದಾರೆ.
ಹೌದು ಅಂದು ಅತ್ಯಂತ ರೋಚಕ ಹೋರಾಟವಾಗಿತ್ತು. ಪಂದ್ಯ ಟೈನಲ್ಲಿ ಅಂತ್ಯವಾದ ಕಾರಣ, ಸೂಪರ್ ಓವರ್ ಆಡಿಸಲಾಯಿತು. ಆದ್ರೆ ಸೂಪರ್ ಓವರ್ ಆಟವೂ ಟೈನಲ್ಲಿ ಅಂತ್ಯವಾಯಿತು. ಪರಿಣಾಮವಾಗಿ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿಗಳನ್ನ ಬಾರಿಸಿದ್ದ ಇಂಗ್ಲೆಂಡ್, ಚಾಂಪಿಯನ್ ಪಟ್ಟ ಅಲಂಕರಿಸಿತು. ಅಂದು ಕ್ರೀಡಾಂಗಣದಲ್ಲಿ ಅಷ್ಟೇ ಅಲ್ಲದೇ, ಇಂಗ್ಲೆಂಡ್ ನ ಬೀದಿ ಬೀದಿಗಳಲ್ಲಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು.
ಅದೇ ರೀತಿ ಮಕ್ಕಳು ಮೊಮ್ಮಕಳ ಜೊತೆ, ಮನೆಯಲ್ಲಿ ಕುಳಿತು ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಅಜ್ಜಿ, ಸಖತ್ ಎಂಜಾಯ್ ಮಾಡಿದ್ರು. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “Age UK” ಎಂಬ ಟ್ವಿಟರ್ ಆಕೌಂಟ್ ನಲ್ಲಿ ಅಜ್ಜಿಯ ವಿಡಿಯೋ ಪೋಸ್ಟ್ ಆಗಿದ್ದು 24 ಗಂಟೆಗಳಲ್ಲೇ ಸರಿಸುಮಾರು ಅತ್ತಿರತ್ತಿರ ಎರಡು ಮಿಲಿಯನ್ ವೀಕ್ಷಣೆ ಕಂಡಿದೆ.
ಈ ಹಿಂದೆ ಭಾರತ-ಬಾಂಗ್ಲಾ ನಡುವಿನ ಲೀಗ್ ಪಂದ್ಯದ ವೇಳೆ, 87 ವರ್ಷದ ಚಾರುಲತಾ ಎಂಬ ಅಜ್ಜಿ, ಸ್ಟೇಡಿಯಂ ನಲ್ಲಿ ಯುವಕರು ನಾಚುವಂತೆ ತಂಡಕ್ಕೆ ಸಪೋರ್ಟ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ಇಂಗ್ಲೆಂಡ್ ನ ಮತ್ತೊಬ್ಬರು ಅಜ್ಜಿ, ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದಾರೆ.