ತಮ್ಮ ಅತ್ಯದ್ಭುತ ಆಟದಿದಂದಲೇ ಅದೆಷ್ಟೋ ಯುವಕರು ಕ್ರಿಕೆಟ್ ಮೈದಾನದತ್ತ ಆಕರ್ಷಿತರಾಗುವಂತ ಪ್ರೇರಣೆ ನೀಡಿದವರಲ್ಲಿ, ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಲೆಜೆಂಡ್ ಆಫ್ ದಿ ಕ್ರಿಕೆಟ್, ಕ್ರಿಕೆಟ್ ದೇವರು ಹೀಗೆ, ಹತ್ತಾರು ಗೌರವಗಳನ್ನು ತನ್ನದಾಗಿಸಿಕೊಂಡಿರುವ ಲಿಟಲ್ ಮಾಸ್ಟರ್, ಯುವ ಅಟಗಾರರ ಪಾಲಿಗೆ ಸದಾ ಸ್ಪೂರ್ತಿ… ಹೀಗೆ ತೆಂಡುಲ್ಕರ್ ಅಟದಿಂದ ಸ್ಪೂರ್ತಿ ಪಡೆದು ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿಯೂ ಒಬ್ಬರು…
ಯಸ್.. ಸದ್ಯ ಕ್ರಿಕೆಟ್ ಲೋಕದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ, ತಮ್ಮ ಬಾಲ್ಯದ ದಿನಗಳಲ್ಲಿನ ಪ್ರೇರಣೆ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಕೊಹ್ಲಿ, ಚೇಸಿಂಗ್ ವೇಳೆ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನನಗೆ ಪ್ರೇರಣೆ ಎಂದಿದ್ದಾರೆ. ಸದ್ಯ ಶಾರ್ಟ್ ಫಾರ್ಮೆಟ್ ಕ್ರಿಕೆಟ್ ನ ವರ್ಲ್ಡ್ ಬೆಸ್ಟ್ ಚೇಸರ್ ಆಗಿರುವ ಕೊಹ್ಲಿ, ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾರೆ. ತಮ್ಮ ಈ ಶೈಲಿಗೆ ಸಚಿನ್ ತೆಂಡುಲ್ಕರ್ ಆಟವೇ ಕಾರಣ ಎಂದಿದ್ದಾರೆ.
“ನಾನೂ ಚಿಕ್ಕವನಿದ್ದಾಗ ನಾನೂ ಕೂಡ ಸಚಿನ್ ರೀತಿ ಆಗಬೇಕು ಅಂತ ಹೇಳುತ್ತಿದ್ದೆ. ನನಗೆ ಈಗಲೂ ನೆನಪಿರುವ ವಿಷಯ ಅಂದ್ರೆ, ಚೇಸಿಂಗ್ ನಲ್ಲಿ ಭಾರತ ಸೋಲು ಅನುಭವಿಸಿದ ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ. ಅದೇ ಆಲೋಚನೆಯಲ್ಲಿರುತ್ತಿದ್ದೆ. ಅಷ್ಟೇ ಅಲ್ಲ ನಾನು ಆ ಪರಿಸ್ಥಿತಿಲ್ಲಿದ್ದರೆ, ಗೆಲುವು ದಾಖಲಿಸಬಹುದಿತ್ತು ಅಂತ ಯೋಚನೆ ಮಾಡುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಈಗ ಅಂತಹ ಪರಿಸ್ಥಿತಿ ಹಲವು ಬಾರಿ ಎದುರಾಗಿದೆ. ಅಂದು ನನ್ನ ತಲೆಯಲ್ಲಿ ಮೂಡುತ್ತಿದ್ದ ಆಲೋಚನೆಗಳೇ ಇಂದು, ನನಗೆ ಯಶಸ್ಸು ತಂದುಕೊಡುತ್ತಿದೆ.
ಈಗಲೂ ನನಗೆ ನೆನಪಿದೆ, ಸಚಿನ್ ಬ್ಯಾಟಿಂಗ್ ಆರಂಭವಾಗುವದಕ್ಕೂ ಮುನ್ನ ನಾನೂ, ತಿನ್ನುವುದಕ್ಕೆ ಚಿಪ್ಸ್ ತೆಗೆದುಕೊಂಡು ಟಿವಿ ಮುಂದೆ ಕುಳಿತಿರುತ್ತಿದ್ದೆ. ಯಾಕಂದ್ರೆ ಅವರ ಬ್ಯಾಟಿಂಗ್ ಕೌಶಲ್ಯ, ಬ್ಯಾಟಿಂಗ್ ಮಾಡುತ್ತಿದ್ದ ರೀತಿ ಬೇರೆಯವರಿಗಿಂತ ಹೆಚ್ಚು ಬಿನ್ನವಾಗಿತ್ತು. ಅವರ ಬ್ಯಾಟಿಂಗ್ ಶೈಲಿ ನನ್ನನ್ನು ಆಕರ್ಷಿಸಿತು. ಅವರ ಬ್ಯಾಟಿಂಗ್ ವೈಭವವನ್ನು ನೋಡುತ್ತ ಬೆಳೆದವರಲ್ಲಿ ನಾನೂ ಒಬ್ಬ. ಕ್ರಿಕೆಟ್ ಮೇಲಿನ ನನ್ನ ಪ್ರೀತಿಗೆ ತೆಂಡುಲ್ಕರ್ ಸ್ಪೂರ್ತಿ ಎಂದಿದ್ದಾರೆ.
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಮಿಂಚು ಹರಿಸುತ್ತಿರುವ ವಿರಾಟ್ ಕೊಹ್ಲಿ, ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ವೇದಿಕೆ ಒಂದರಲ್ಲಿ ಸಚಿನ್ ಹೇಳಿದ್ದ ಮಾತನ್ನು ನಿಜ ಮಾಡುವತ್ತ ಮುನ್ನುಗ್ಗುತ್ತಿದ್ದಾರೆ. ದಶಕಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ ಸಚಿನ್ ತೆಂಡುಲ್ಕರ್, ಸಾಲು ಸಾಲು ದಾಖಲೆ ಗಳನ್ನ ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ. ಈ ಹಿಂದೆ ವೇದಿಕೆ ಒಂದರಲ್ಲಿ ಮಾತನಾಡಿದ್ದ ಸಚಿನ್ ತೆಂಡುಲ್ಕರ್ ನನ್ನ ದಾಖಲೆಗಳನ್ನ ಮುರಿಯುವ ಶಕ್ತಿ ವಿರಾಟ್ ಕೊಹ್ಲಿಗೆ ಇದೆ ಎಂದು ಹೇಳಿದ್ದರು.