ಜಕಾರ್ತಾ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಮೌಂಟ್ ಸಿನಾಬಂಗ್ನಲ್ಲಿ ಇಂದು ಬೆಳಗ್ಗೆ ಮತ್ತೆ ಜ್ವಾಲಾಮುಖಿ ಮುನ್ನೆಚ್ಚರಿಕೆ ಸ್ಫೋಟಿಸಿದೆ. ಇದರಿಂದ ಗಾಳಿಯಲ್ಲಿ ಸುಮಾರು 6,500 ಅಡಿ ಎತ್ತರದಷ್ಟು ದಟ್ಟ ಹೊಗೆ ಆವರಿಸಿದ್ದು, ಸಮೀಪದ ಗ್ರಾಮಗಳೆಲ್ಲಾ ಧೂಳು ಮತ್ತು ಬೂದಿಯಿಂದ ಆವೃತವಾಗಿವೆ. ಜ್ವಾಲಾಮುಖಿಯ ದಟ್ಟ ಹೊಗೆಯಿಂದ ವಿಮಾನ ಹಾರಾಟಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಅಂತ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಜ್ವಾಲಾಮುಖಿ ಸ್ಥಳದ ಸಮೀಪಿರುವ ಹಳ್ಳಿಗಳ ನಿವಾಸಿಗಳಿಗೆ, ಯಾವುದೇ ಕ್ಷಣದಲ್ಲಾದ್ರೂ ಲಾವಾ ಉಕ್ಕಿ ಬರೋ ಸಾಧ್ಯತೆ ಇದೆ ಅಂತ ನೀಡಲಾಗಿದೆ. ಈವರೆಗೆ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಈ ಹಿಂದೆಯೇ ಜ್ವಾಲಾಮುಖಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದ್ದು, ಇಲ್ಲಿ ಯಾರೂ ವಾಸವಾಗಿಲ್ಲ ಅಂತ ತಿಳಿದುಬಂದಿದೆ.
ಇಂಡೋನೇಷ್ಯಾದಲ್ಲಿ ಆ್ಯಕ್ಟೀವ್ ಆಗಿರುವ ಸುಮಾರು 130 ಜ್ವಾಲಾಮುಖಿಗಳಿವೆ. 400 ವರ್ಷಗಳಲ್ಲೇ ಮೊದಲ ಬಾರಿಗೆ 2010ರಲ್ಲಿ ಸಿನಾಬಂಗ್ ಪರ್ವತ ಜೋರಾದ ಸದ್ದು ಮಾಡಿತ್ತು. ನಂತರ 2013ರಲ್ಲಿ ಜ್ವಾಲಾಮುಖಿ ಸ್ಫೋಟಿಸಿ, ಅಂದಿನಿಂದ ಸಕ್ರಿಯವಾಗಿದೆ. 2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದರು. ಇನ್ನು 2016ರಲ್ಲಿ ಕೂಡ 7 ಮಂದಿ ಜ್ವಾಲಾಮುಖಿಗೆ ಬಲಿಯಾಗಿದ್ದರು.