ಕ್ರೀಡೆ : ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಸೌತ್ ಆಫ್ರಿಕಾ, ಟೂರ್ನಿಯಲ್ಲಿ 5ನೇ ಸೋಲು ಅನುಭವಿಸುವ ಮೂಲಕ, ಅಧಿಕೃತವಾಗಿ ಟೂರ್ನಿಯಿಂದ ಹೊರ ಬಿದ್ದಿತು. ನಿನ್ನೆ ಲಾರ್ಡ್ಸ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 49 ರನ್ ಗಳ ಸೋಲು ಅನುಭವಿಸಿದ ಸೌತ್ ಆಫ್ರಿಕಾ ನಿರಾಸೆ ಅನುಭವಿಸಿತು. ನಿನ್ನೆ ಟಾಸ್ ಗೆದ್ದ ಪಾಕ್, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕ್, ನಿನ್ನೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪರಿಣಾಮ ನಿಗಧಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 308 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಹರಿಣಗಳ ಪಾಲಿಗೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ, ಗೆಲುವಿಗಾಗಿ ಹೋರಾಟ ನಡೆಸಿದರಾದ್ರು, ಗೆಲುವು ಮಾತ್ರ ಸಿಗಲಿಲ್ಲ.
ಅಂತಿಮವಾಗಿ ಆಫ್ರಿಕಾ, ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಕಲೆ ಹಾಕಿತು. ಈ ಮೂಲಕ 49 ರನ್ ಗಳ ಸೋಲನುಭವಿಸುವ ಜೊತೆಗೆ, ಈ ಹಿಂದಿನ ವಿಶ್ವಕಪ್ ಜರ್ನಿಯಲ್ಲೇ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಈ ಮೂಲಕ 1992 ರಿಂದೀಚೆಗೆ ಇದೇ ಮೊದಲ ಬಾರಿ, ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ನಲ್ಲೇ ಹೊರ ಬಿದ್ದು ನಿರಾಸೆ ಅನುಭವಿಸಿತು. ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿ, ಒಂದು ಪಂದ್ಯ ರದ್ದಾದ ಕಾರಣ 3 ಪಾಯಿಂಟ್ ಗಳನ್ನಷ್ಟೇ ಗಳಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಆಡಿದ 6 ಪಂದ್ಯಗಳಲ್ಲಿ 2 ಗೆಲುವು ಸೇರಿದಂತೆ 5 ಪಾಯಿಂಟ್ ಗಳಿಸಿರುವ ಪಾಕ್, ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ತಲುಪಬೇಕಾದರೆ ಬಾಕಿ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಬೇಕಾಗಿದೆ.