ಬೀದರ್ ನಲ್ಲಿ ಮನೆ ಬೀಗ ಮುರಿದು ₹10 ಲಕ್ಷ ಚಿನ್ನ ಕಳವು!

ಬೀದರ್ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿರುವ ಭಾರೀ ಕಳ್ಳತನ ನಡೆದಿದೆ. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಹೌದು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮತ್ತೊಂದು ಭಾರೀ ಕಳ್ಳತನ ನಡೆದಿದೆ. ಮನೆ ಬೀಗ ಮುರಿದು ಕಳ್ಳರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಗಳ್ಳರು ತಮ್ಮ ಕೈಚಳಕವನ್ನ ತೋರಿಸಿದ್ದಾರೆ.

ಈ ಘಟನೆ ಭಾಲ್ಕಿಯ ಬಾಲಾಜಿ ನಗರದಲ್ಲಿ ಜಾಲೇಂದರ್ ಭೀಮಣ್ಣ ಮತ್ರೆ ಎಂಬುವವರ ಮನೆಗೆ ಸಂಬಂಧಪಟ್ಟದ್ದಾಗಿದೆ. ಮನೆಯವರು ಹೊರಗಿದ್ದ ಸಮಯವನ್ನು ಬಳಸಿಕೊಂಡು ಕಳ್ಳರು ಮನೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಮನೆಯ ಒಳಗೆ ಶೋಧ ನಡೆಸಿದ ಕಳ್ಳರು ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 250 ಗ್ರಾಂ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮಾಲೀಕರು ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ. ತಕ್ಷಣವೇ ಭಾಲ್ಕಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳ ಹಾಗೂ ಫೊರೆನ್ಸಿಕ್ ತಂಡದ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ, ಕಳ್ಳರ ಪತ್ತೆಗೆ ಭಾಲ್ಕಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಗಳು ಹಾಗೂ ಇತರ ಪುರಾವೆಗಳ ಆಧಾರದಲ್ಲಿ ತನಿಖೆ ಮುಂದುವರಿಸುತ್ತಿದ್ದಾರೆ.

ಸದ್ಯ ಈ ಘಟನೆ ನಂತರ ಬಾಲಾಜಿ ನಗರದ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹಲವರು ಮನೆ ಬಾಗಿಲಿಗೆ ಹೆಚ್ಚುವರಿ ಲಾಕ್ ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರು ಸಿಸಿ ಕ್ಯಾಮೆರಾ ಹೊಂದಿಸುತ್ತಿದ್ದಾರೆ. ಸಾರ್ವಜನಿಕರು ಪೊಲೀಸರಿಗೆ ಹೆಚ್ಚು ಮೊರೆ ಹೋಗುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author