ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ₹9 ಕೋಟಿ ಡ್ರಗ್ಸ್ ಜಪ್ತಿ!

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು DRI ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ಗಳನ್ನು ನಾಯಿಗಳಿಗೆ ನೀಡುವ ಆಹಾರದ ಪ್ಯಾಕೆಟ್‌ಗಳಲ್ಲಿ ಅಡಗಿಸಿ ಸಾಗಿಸಲಾಗುತ್ತಿತ್ತು. ಯಾರಿಗೂ ಅನುಮಾನ ಬಾರದಂತೆ ಈ ರೀತಿ ಸೂಕ್ಷ್ಮವಾಗಿ ಮರೆಮಾಚಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಸೂಕ್ಷ್ಮ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ರೈಲಿನಲ್ಲಿಯೇ ಈ ದಂಧೆಯನ್ನು ಪತ್ತೆಹಚ್ಚಿ, ಡ್ರಗ್ಸ್ ಸಹಿತ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಇದೀಗ ಪ್ರಕರಣದ ತನಿಖೆ ಮುಂದುವರಿದಿದ್ದು, ಬಂಧಿತನ ಜೊತೆ ಸಂಪರ್ಕದಲ್ಲಿದ್ದ ಮತ್ತಿಬ್ಬರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೂ, ಆರೋಪಿಯ ಬೆಂಗಳೂರಿನ ಮನೆಯಲ್ಲಿ ಶೋಧ ನಡೆಸಿದ ವೇಳೆ 40 ಡೆಬಿಟ್ ಕಾರ್ಡ್‌ಗಳು ಮತ್ತು 70ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ.

ಇದರಿಂದಾಗಿ ಈ ಜಾಲದ ಹಿಂದೆ ದೊಡ್ಡ ಸಂಘಟಿತ ದಂಧೆ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಡಿಆರ್‌ಐ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author