ನವದೆಹಲಿ: ರಾಜೀವ್ ಗಾಂಧಿ ತಾವು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್ ಎಸ್ ವಿರಾಟ್’ ಅನ್ನು ತಮ್ಮ ಸ್ವಂತ ಟ್ಯಾಕ್ಸಿ ರೀತಿ ಬಳಸಿಕೊಂಡಿದ್ರು ಅಂತ ಪ್ರಧಾನಿ ಮೋದಿ ಹೊಸದೊಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ರಾಜೀವ್ ಗಾಂಧಿ ಸಾಯುವಹೊತ್ತಿಗೆ ನಂಬರ್ 1 ಭ್ರಷ್ಟಾಚಾರಿಯಾಗಿದ್ರು ಅನ್ನೋ ಮೋದಿ ಹೇಳಿಕೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಇದರ ಬೆನ್ನಲ್ಲೇ ಇದೀಗ ಯುದ್ಧ ನೌಕೆಯನ್ನ ತಮ್ಮ ಕುಟುಂಬದ ವಿಹಾರಕ್ಕಾಗಿ ಟ್ಯಾಕ್ಸಿ ರೀತಿ ಬಳಸಿದ್ರು ಅಂತ ಆರೋಪಿಸಿದ್ದಾರೆ.
ಭಾರತದ ಪ್ರಮುಖ ಯುದ್ಧ ನೌಕೆಯೊಂದು ದೇಶದ ನಾಯಕರು ರಜೆ ಕಳೆಯಲು ಬಳಕೆಯಾಗಿರಬಹುದು ಅಂತ ನೀವು ಎಂದಾದರೂ ಊಹಿಸಿದ್ದೀರಾ? ಈ ರೀತಿ ಕೃತ್ಯವನ್ನ ಒಂದು ವಂಶ ಮಾಡಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜೀವ್ ಗಾಂಧಿಯ ಅತ್ತೆ ಮನೆಯವರು ಇಟಲಿಯಿಂದ ಬಂದಿದ್ದಾಗ ಅವರ ಸೇವೆಗೆ ಸೇನಾಪಡೆಯ ಹೆಲಿಕಾಪ್ಟರ್ ನಿಯೋಜನೆಗೊಂಡಿತ್ತು. ದ್ವೀಪವೊಂದರ ಬಳಿ ದೇಶದ ಭದ್ರತೆಗೆ ಬಳಕೆಯಾಗಬೇಕಿದ್ದ ನೌಕೆಯನ್ನು 10 ದಿನಗಳ ಕಾಲ ಉಳಿಸಿಕೊಳ್ಳಲಾಗಿತ್ತು. ಅಲ್ಲದೆ ನೌಕಾಪಡೆಯು ಗಾಂಧಿ ಕುಟುಂಬದ ಆತಿಥ್ಯ ವಹಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದು ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ ಅಲ್ಲವೆ ಅಂತ ಮೋದಿ ಆರೋಪಿಸಿದ್ದಾರೆ.
ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು 1987ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಲಾಗಿತ್ತು. ಅಂದಿನಿಂದ 2016ರವರೆಗೆ, ಅಂದ್ರೆ ಸುಮಾರು 30 ವರ್ಷಗಳ ಕಾಲ ವಿರಾಟ್ ನೌಕಾಪಡೆಯ ಸೇವೆಯಲ್ಲಿತ್ತು.