ನವದೆಹಲಿ : ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ನಿಮ್ಮನ್ನು ನಾವು ಸುಮ್ಮನೇ ಬಿಡುವುದಿಲ್ಲ. ನಿಮ್ಮ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಯಾವುದೇ ಭಯೋತ್ಪಾದಕ ಚಟುವಟಿಕೆಯಿಂದ ಭಾರತವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಹಲ್ಗಾಮ್ ಉಗ್ರ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಅಪರಾಧಿಗಳು ಮತ್ತು ಸಂಚುಕೋರರಿಗೆ ಭಾರತವು ಗಟ್ಟಿಯಾದ ಮತ್ತು ಸ್ಪಷ್ಟವಾದ ಪ್ರತ್ಯುತ್ತರವನ್ನು ನೀಡಿಯೇ ನೀಡುತ್ತದೆ. ಮಂಗಳವಾರ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಪಾಕಿಸ್ತಾನ ಮೂಲದ ಶಂಕಿತ ಭಯೋತ್ಪಾದಕರು 26 ಪುರುಷ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದಾರೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಹೇಡಿತನದ ಕೃತ್ಯ ಎಸಗಿದ್ದಾರೆ. ಇದರಲ್ಲಿ ನಾವು ಅನೇಕ ಮುಗ್ಧ ಜೀವಗಳನ್ನು ಕಳೆದುಕೊಂಡಿದ್ದೇವೆ. ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾರತೀಯರಿಗೆ ಭರವಸೆ ನೀಡುತ್ತೇನೆ.
ಬುದ್ಧಿ ಕಲಿಸುತ್ತೇವೆ..
ಅಲ್ಲದೆ ಈ ಕೃತ್ಯದ ಅಪರಾಧಿಗಳು ಸೇರಿದಂತೆ ಇದಕ್ಕಾಗಿಯೇ ತೆರೆಮರೆಯಲ್ಲಿರುವ ಸಂಚುಕೋರರಿಗೂ ಬುದ್ದಿ ಕಲಿಸುತ್ತೇವೆ. ಆರೋಪಿಗಳು ಶೀಘ್ರದಲ್ಲೇ ತಾವು ಮಾಡಿದ ಕೆಲಸಕ್ಕೆ ಪ್ರತಿಫಲವನ್ನು ಅನುಭವಿಸಲಿದ್ದಾರೆ. ಭಾರತದಂತಹ ನೆಲದಲ್ಲಿ ಇಂತಹ ದುಷ್ಕರ್ತ್ಯಕ್ಕೆ ನಾವು ಆಸ್ಪದ ನೀಡುವುದಿಲ್ಲ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಶಪಥ ಮಾಡಿದ್ದಾರೆ. ನಾವು ಈ ದಾಳಿಗೆ ಹೆದರಲ್ಲ, ನಿಮ್ಮನ್ನ ಮಟ್ಟ ಹಾಕುತ್ತೇವೆ ಎಂದು ಅವರು ಉಗ್ರರ ವಿರುದ್ಧ ಸಮರ ಸಾರಿದ್ದಾರೆ.
ಎಲ್ಲೇ ಅಡಗಿ ಕುಳಿತಿದ್ರೂ ಬಿಡೋದಿಲ್ಲ..!
ನಾವೆಲ್ಲ ಒಂದಾಗಿದ್ದೇವೆ, ಭಾರತವೂ ಯಾವಾಗಲೂ ಈ ಭಯೋತ್ಪಾದಕತೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವನ್ನು ಹೊಂದಿದೆ. ಈಗಲೂ ಸಹ ಇಂತವರನ್ನು ಹೊಸಕಿ ಹಾಕಲು ಭಾರತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪಾತಕಿಗಳು ಎಲ್ಲೇ ಅಡಗಿ ಕುಳಿತಿದ್ದರೂ ಸಹ ನಾವು ಅವರನ್ನು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಲಿಯಾದವರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಿಕೊಂಡ ಈ ದಾಳಿಯು ಸಮುದಾಯಗಳನ್ನು ನಡುಗಿಸಿದೆ. ಆದರೆ ಈಗ ದಾಳಿಯ ಕುರಿತು ಅನೇಕ ಉತ್ತರಗಳನ್ನು ಹುಡುಕುವಂತೆ ಮಾಡಿದೆ. ಪ್ರತಿಯೊಂದು ಅಗತ್ಯ ಮತ್ತು ಪರಿಣಾಮಕಾರಿ ಹೆಜ್ಜೆಯನ್ನು ನಮ್ಮ ಸರ್ಕಾರ ಇಡಲಿದೆ. ಇದೊಂದು ನಮ್ಮ ಹೊಣೆಗಾರಿಕೆಯಾಗಿದೆ. ಅಲ್ಲದೆ ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬಗಳಿಗೆ ನಾವು ನೀಡುವ ಭರವಸೆಯಾಗಿದೆ ಎಂದು ಅವರು ಉಗ್ರ ದಾಳಿಯನ್ನು ಕಟುವಾಗಿ ಟೀಕಿಸಿದ್ದಾರೆ.