ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಉಗ್ರರ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಭಾರತ ಈಗಾಗಲೇ ಒಂದದಾ ಮೇಲೊಂದರಂತೆ ದೊಡ್ಡ ಆಘಾತ ನೀಡುತ್ತಲೇ ಬಂದಿದೆ. ಆರಂಭದಲ್ಲಿ ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ, ಬಳಿಕ ಪಾಕಿಸ್ತಾನಿಗಳ ವೀಸಾ ರದ್ದುಗೊಳಿಸಿ, ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಂಡಿತ್ತು.
ಇಷ್ಟೇ ಅಲ್ಲದೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಟ್ವಿಟ್ಟರ್ ಖಾತೆ ಸೇರಿದಂತೆ, ಭಾರತ ವಿರೋಧಿ ಪ್ರಚೋದನಾಕಾರಿ ಹಾಗೂ ಉದ್ರೇಕಕಾರಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ. ಇನ್ನೂ ಪಾಕಿಸ್ತಾನಿ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಿಗೂ ಭಾರತದಲ್ಲಿ ಬ್ರೇಕ್ ಹಾಕಲಾಗಿದೆ. ಆದರೆ ಇದಷ್ಟೇ ಅಲ್ಲದೆ ಇದೀಗ ಭಾರತ ಇನ್ನೊಂದು ದಿಟ್ಟ ಹೆಜ್ಜೆ ಇಟ್ಟಿದ್ದು ಪಾಕಿಗಳು ಸಂಪೂರ್ಣ ಕಂಗಾಲಾಗಿ ಹೋಗುವಂತೆ ಮಾಡಿದೆ.
ಶುರುವಾಯ್ತು ಭಾರತದ ವ್ಯಾಪಾರ ಯುದ್ಧ..
ಪ್ರಮುಖವಾಗಿ ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುವ ಪಾಕಿಸ್ತಾನಕ್ಕೆ ಭಾರತ ಆರ್ಥಿಕ ಶಾಕ್ ನೀಡುವ ಮೂಲಕ ವ್ಯಾಪಾರ ಯುದ್ಧ ನಡೆಸಿದೆ. ಪಾಕಿಸ್ತಾನದಿಂದ ತಯಾರಾಗುವ ಅಥವಾ ರಫ್ತು ಮಾಡುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ರದ್ದುಗೊಳಿಸಿದೆ. ಅಲ್ಲದೆ ಮುಕ್ತವಾಗಿ ಆಮದು ಮಾಡಿಕೊಳ್ಳಬಹುದಾದ ಅಥವಾ ಬೇರೆ ರೀತಿಯಲ್ಲಿ ಅನುಮತಿಸಲಾಗಿದ್ದರೂ, ಸಹ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅದನೆಲ್ಲ ನಿಷೇಧಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಿಷೇಧಕ್ಕೆ ಯಾವುದೇ ವಿನಾಯಿತಿಗೆ ಭಾರತ ಸರ್ಕಾರದ ಪೂರ್ವಾನುಮತಿ ಅಗತ್ಯವಿರುತ್ತದೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆಯಲ್ಲಿ ಖಡಕ್ ಸೂಚನೆ ನೀಡಿದೆ.
1000ಕ್ಕೂ ಅಧಿಕ ಮದರಸಾ ಬಂದ್..!
ಇನ್ನೂ ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆಗಳನ್ನು ನಡೆಸುವುದರ ಜೊತೆಗೆ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ವಿಚಾರದಲ್ಲಿ ಸೇನೆಗೆ ಸಂಪೂರ್ಣ ಪರಮಾಧಿಕಾರ ನೀಡಿರುವುದಕ್ಕೆ ರಣಹೇಡಿ ನಿದ್ದೆಗಟ್ಟಿದೆ. ಮೊದಲೇ ಆರ್ಥಿಕ ಸಂಕಷ್ಟ, ಅರಾಜಕತೆಯಿಂದ ಬಳಲುತ್ತಿರುವ ಪಾಕಿಸ್ತಾನ ಸಾಧ್ಯವಾದಷ್ಟು ಭಾರತದ ಸಂಭಾವ್ಯ ದಾಳಿಯಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದೆ. ಇದಕ್ಕಾಗಿಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಒಕೆಯಲ್ಲಿ 1,000ಕ್ಕೂ ಹೆಚ್ಚು ಮದರಸಾಗಳನ್ನು ಮುಚ್ಚಿದೆ. ಭಾರತದಿಂದ ಯಾವುದೇ ಕ್ಷಣದಲ್ಲಿಯೂ ಸಂಭವನೀಯ ದಾಳಿಯ ಭಯದಿಂದ ಪಾಕಿಸ್ತಾನ ಪತರುಗುಟ್ಟಿದೆ. ಭಾರತವು ಈ ಕೇಂದ್ರಗಳನ್ನು ಭಯೋತ್ಪಾದಕರ ಅಡಗುತಾಣಗಳಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದೆ. 2016 ರಲ್ಲಿ ಉರಿ ದಾಳಿಯ ನಂತರ ಭಾರತೀಯ ಕಮಾಂಡೋಗಳು ಪಿಒಕೆಯಲ್ಲಿ ಭಯೋತ್ಪಾದಕರ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನಂತಹ ಕಾರ್ಯಾಚರಣೆಗಳು ಮತ್ತೊಮ್ಮೆ ಸಂಭವಿಸಬಹುದು ಎಂಬ ಭಯ ಪಾಕಿಸ್ತಾನದಲ್ಲಿ ಮನೆಮಾಡಿದೆ.
ತರಾರ್ ಅಕೌಂಟ್ ಬ್ಲಾಕ್..!
ಇನ್ನೂ ಏಪ್ರಿಲ್ 30ರ ಬೆಳಗಿನ ಜಾವ 2 ಗಂಟೆಗೆ ಪತ್ರಿಕಾಗೋಷ್ಠಿ ಕರೆದು ಭಾರತ ಮುಂದಿನ 24-36 ಗಂಟೆಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಎಂದು ಹೇಳಿದ್ದ ಪಾಕ್ ಸಚಿವ ಅತ್ತಾವುಲ್ಲಾ ತರಾರ್‌ನ ಟ್ವಿಟ್ಟರ್ ಖಾತೆಯನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ, ಪಾಕಿಸ್ತಾನ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿದೆ. ಇದಕ್ಕೆ ಭಾರತ ಕೂಡ ಪ್ರತಿಯಾಗಿ ದಾಳಿ ಮಾಡಿದೆ.
ಈ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ ನಂತರ ಈ ಹೇಳಿಕೆಯನ್ನು ಸಚಿವ ಅತಾವುಲ್ಲಾ ತರಾರ್ ನೀಡಿದ್ದರು. ಭಾರತ ಒಂದು ವೇಳೆ ಪಾಕ್ ಮೇಲೆ ದಾಳಿ ನಡೆಸಿದರೆ. ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪಾಕ್ ಎಲ್ಲದಕ್ಕೂ ಸಿದ್ಧತೆಯನ್ನು ನಡೆಸಿದೆ. ಭಾರತ ಪಾಕಿಸ್ತಾನದ ಮೇಲೆ ಯುದ್ಧ ಹೇರಲು ಪ್ರಯತ್ನಿಸಿದರೆ ಭಾರತ ವಿನಾಶ ಆಗುತ್ತದೆ ಎಂಬ ಬೊಗಳೆ ಬಿಟ್ಟಿದ್ದರು. ಇದರ ಜತೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೂಡ ಭಾರತದ ಜೊತೆ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಏನಾದರೂ ಆಗಬೇಕಾದರೆ, ಅದು ಎರಡು ಅಥವಾ ಮೂರು ದಿನಗಳಲ್ಲಿ ಸಂಭವಿಸುತ್ತದೆ ಎಂದು ಖ್ವಾಜಾ ಹೇಳಿಕೆ ನೀಡಿದ್ದರು.