ಕರ್ನಾಟಕ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಧಗಧಗಿಸ್ತಿದೆ. ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ರೂ, ಆಂತರಿಕ ಕಲಹ, ಭಿನ್ನಾಭಿಪ್ರಾಯ, ಗೊಂದಲ ಬಗೆಹರಿಸಲು ತಿಣುಕಾಡುತ್ತಿದ್ದಾರೆ. ಅಸಮಾಧಾನಿತರ ನಾಯಕತ್ವ ಬದಲಾವಣೆ ಬೇಡಿಕೆ, ಸುರ್ಜೇವಾಲರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ.
ಮೈಸೂರಿನಲ್ಲಿ ಡಿಕೆಶಿ ಕೈ ಹಿಡಿದುಕೊಂಡಿದ್ದ ಸಿದ್ದರಾಮಯ್ಯ, ಒಗ್ಗಟ್ಟಿನ ಪ್ರದರ್ಶನ ಮಾಡಿದ್ರು. ಬಳಿಕ ಮುಂದಿನ 5 ವರ್ಷ ನಾನೇ ಸಿಎಂ ಅಂತಾ ಸಿದ್ದು ಹೇಳಿದ್ರು. ಡಿಕೆಶಿ ಕೂಡ, ನನಗೆ ಬೇರೆ ಮಾರ್ಗವಿಲ್ಲ, ಸಿದ್ದರಾಮಯ್ಯ ಅವರನ್ನೇ ಬೆಂಬಲಿಸಬೇಕು ಅಂತಾ ಹೇಳಿದ್ರು. ಇಷ್ಟಾದರೂ ಬೆಂಬಲಿಗರು ಮಾತ್ರ ತಮ್ಮ ಪಟ್ಟು ಬಿಡ್ತಿಲ್ಲ.
ಈಗಾಗಲೇ ಡಿಕೆಶಿ ಪರ ಮಾತಾಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಗೆ, ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೂ ತಮ್ಮ ನಾಯಕರ ಬಗ್ಗೆ ನಿಲುವು ಪ್ರದರ್ಶನ ಮಾಡೋದನ್ನ ಬಿಟ್ಟಿಲ್ಲ. ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇನ್ನು, ಸಿದ್ದರಾಮಯ್ಯ ಪರ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾಧು, ಆಳಂದ ಶಾಸಕ ಬಿ.ಆರ್. ಪಾಟೀಲ್, ಕಾಗವಾಡ ಶಾಸಕ ರಾಜು ಕಾಗೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಚಾಮರಾಜ ಕ್ಷೇತ್ರ ಶಾಸಕ ಹರೀಶ್ ಗೌಡ, ಕೃಷ್ಣರಾಜ ಶಾಸಕ ಡಿ. ರವಿಶಂಕರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡಿಕೆಶಿ ಪರವಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ನರಸಿಂಹರಾಜ ಶಾಸಕ ತನ್ವೀರ್ ಸೇಠ್, ಆನೇಕಲ್ಲಿನ ಬಿ. ಶಿವಣ್ಣ, ಕೆಜಿಎಫ್ ನ ರೂಪಕಲಾ ಶಶಿಧರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರಿನ ಪುಟ್ಟಸ್ವಾಮಿಗೌಡ, ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್, ಪುಲಕೇಶಿ ನಗರದ ಎ.ಸಿ. ಶ್ರೀನಿವಾಸ್, ದಕ್ಷಿಣ ಕನ್ನಡ ಶಾಸಕ ಅಶೋಕ್ ರೈ ಬ್ಯಾಟಿಂಗ್ ಮಾಡುತ್ತಿದ್ದಾರೆ.