ಪರಿಶಿಷ್ಟ ಜಾತಿಯ (SC) ವಿಧವೆಯರ ಮರು ವಿವಾಹವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಯೋಜನೆಯಡಿ ಮದುವೆಯಾಗುವ ದಂಪತಿಗೆ ₹3 ಲಕ್ಷ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಈ ಯೋಜನೆಯು ಮಹಿಳೆಯರಿಗೆ ಸಾಮಾಜಿಕ ಭದ್ರತೆ, ಗೌರವಯುತ ಜೀವನ ಹಾಗೂ ಹೊಸ ಬದುಕಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.
ಈ ಹಿಂದೆ ಈ ಯೋಜನೆಯಡಿ ₹2 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದೀಗ ಸರ್ಕಾರ ಮೊತ್ತವನ್ನು ₹3 ಲಕ್ಷಕ್ಕೆ ಹೆಚ್ಚಿಸಿದ್ದು, ಅರ್ಹ ದಂಪತಿಗಳು ಆನ್‌ಲೈನ್ ಅಥವಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿಯ ವಿಧವೆಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಒದಗಿಸುವುದು, ಆರ್ಥಿಕ ಭದ್ರತೆ ನೀಡುವುದು ಹಾಗೂ ಮರು ವಿವಾಹದ ಮೂಲಕ ಅವರ ಜೀವನವನ್ನು ಮರು ರೂಪಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಅರ್ಹತಾ ಮಾನದಂಡಗಳನ್ನ ನೋಡೋದಾದ್ರೆ ಮಹಿಳೆ ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದವರಾಗಿರಬೇಕು. ಮಹಿಳೆಗೆ ಇದು ಮರು ವಿವಾಹವಾಗಿರಬೇಕು ಅಂದ್ರೆ ಮೊದಲ ಪತಿ ಮೃತಪಟ್ಟಿರಬೇಕು. ಪುರುಷನಿಗೆ ಇದು ಮೊದಲ ವಿವಾಹವಾಗಿರಬೇಕು. ಮಹಿಳೆಗೆ ಕನಿಷ್ಠ 18 ವರ್ಷ, ಪುರುಷನಿಗೆ 21 ವರ್ಷ ಪೂರ್ಣವಾಗಿರಬೇಕು. ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಹಾಗಾದ್ರೆ ಅಗತ್ಯ ದಾಖಲೆಗಳು ಯಾವುವು ಅನ್ನೋದನ್ನ ನೋಡೋದಾದ್ರೆ ದಂಪತಿಗಳ ಜಾತಿ ಪ್ರಮಾಣಪತ್ರ. ಮಹಿಳೆಯ ಮೊದಲ ಪತಿಯ ಮರಣ ಪ್ರಮಾಣಪತ್ರ. ಅಧಿಕೃತ ವಿವಾಹ ನೋಂದಣಿ ಪತ್ರ. ದಂಪತಿಗಳ ಆಧಾರ್ ಕಾರ್ಡ್ ಪ್ರತಿಗಳು. ಜಂಟಿ ಬ್ಯಾಂಕ್ ಖಾತೆ ವಿವರ ಹಾಗು ಮದುವೆ ಫೋಟೋಗಳು ಬೇಕು. ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಭಾಗಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ನಿಮ್ಮ ಜಿಲ್ಲೆಯ ಅಥವಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಹಾಕಬಹುದು.
ವರದಿ : ಲಾವಣ್ಯ ಅನಿಗೋಳ




