‘₹500Cr ಸಿಎಂ ಡೀಲ್’ ಹೇಳಿಕೆ: ಸಿಧು ಪತ್ನಿಗೆ ಕಾಂಗ್ರೆಸ್ ಬ್ರೇಕ್!

ಪಂಜಾಬ್ ಕಾಂಗ್ರೆಸ್‌ನಲ್ಲಿ ದೊಡ್ಡ ರಾಜಕೀಯ ಸಂಚಲನ ಸೃಷ್ಟಿಸಿದ ಹೇಳಿಕೆಯ ಬೆನ್ನಲ್ಲೇ, ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಅವರು ನೀಡಿದ ಹೇಳಿಕೆಯಲ್ಲಿ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯ ಸ್ಥಾನ ಪಡೆಯಲು ₹500 ಕೋಟಿ ರೂ. ‘ಸೂಟ್ ಕೇಸ್’ ನೀಡಬೇಕಾಗುತ್ತದೆ ಎಂದು ನವಜೋತ್ ಕೌರ್ ಆರೋಪಿಸಿದ್ದರು. ಈ ಹೇಳಿಕೆ ತಕ್ಷಣವೇ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷಕ್ಕೆ ದೊಡ್ಡ ಮುಜುಗರ ತಂದಿತ್ತು.

ಕೌರ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕೋಪಗೊಂಡ ಕಾಂಗ್ರೆಸ್ ಹೈಕಮಾಂಡ್, ಅವರನ್ನು ಯಾವುದೇ ಪೂರ್ವ ಸೂಚನೆ ನೀಡದೇ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡುವ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಆದೇಶ ಜಾರಿ ಬಂದಿದೆ.

2027ರ ಪಂಜಾಬ್ ವಿಧಾನಸಭಾ ಚುನಾವಣೆ ನೆನಪಿನಲ್ಲಿಟ್ಟುಕೊಂಡು ಮಾತನಾಡಿದ ಕೌರ್, ಕಾಂಗ್ರೆಸ್‌ನಲ್ಲಿ ₹500 ಕೋಟಿ ನೀಡುವವರನ್ನೇ ಮುಖ್ಯಮಂತ್ರಿಯ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ. ನಾವು ಸದಾ ಪಂಜಾಬ್‌ಗಾಗಿ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ನಮ್ಮ ಬಳಿ ₹500 ಕೋಟಿ ನೀಡುವ ಸಾಮರ್ಥ್ಯ ಇಲ್ಲ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ನವಜೋತ್‌ ಸಿಂಗ್‌ ಸಿಧು ಅವರನ್ನು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಮಾತ್ರವೇ ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ’ ಎಂದು ಹೇಳಿದ್ದರು. ನವಜೋತ್ ಸಿಂಗ್ ಸಿಧು ಈಗಾಗಲೇ ಪಕ್ಷದೊಂದಿಗೆ ಅಂತರಕ್ಕೆ ಕಾರಣವಾಗಿದ್ದ ಹಲವು ವಿಷಯಗಳಲ್ಲಿ ಸುದ್ದಿಯಾಗಿದ್ದರು. ಇತ್ತೀಚಿನ ವಿವಾದ ಸಿಧುವಿನ ರಾಜಕೀಯ ಭವಿಷ್ಯಕ್ಕೂ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ವರದಿ : ಲಾವಣ್ಯ ಅನಿಗೋಳ

About The Author