ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಅಥವಾ ಲೀಸ್ ಪಡೆಯಲು ಯತ್ನಿಸಿದ ನೂರಾರು ಕುಟುಂಬಗಳು ಭಾರೀ ವಂಚನೆಗೆ ಒಳಗಾಗಿದ್ದಾರೆ. ‘ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಎಂಬ ಖಾಸಗಿ ಕಂಪನಿ ಸುಮಾರು ₹60 ಕೋಟಿ ವಂಚಿಸಿದೆ. ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನಗರದ ಜನರಲ್ಲಿ ಆತಂಕ ಮೂಡಿಸಿದೆ.
ವಿವೇಕ್ ಕೇಶವನ್ ಎಂಬಾತ ಈ ಕಂಪನಿಯ ಮುಖ್ಯಸ್ಥ. ಮೊದಲು, ವಿವೇಕ್ ಮತ್ತು ಅವನ ತಂಡ ಬೆಂಗಳೂರಿನ ವಿವಿಧ ಪ್ರದೇಶಗಳಾದ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆ ಮಾಲೀಕರಿಂದ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾನೆ. ಅವುಗಳನ್ನು ಮರು ಬಾಡಿಗೆ ಮಾದರಿಯಲ್ಲಿ ನೂರಾರು ಕುಟುಂಬಗಳಿಗೆ ನೀಡುತ್ತಾ, ಲಕ್ಷಾಂತರ ರೂಪಾಯಿಗಳನ್ನು ಮುಂಗಡವಾಗಿ ಸಂಗ್ರಹಿಸುತ್ತಿದ್ದ.
ಆರಂಭದಲ್ಲಿ ಕೆಲವು ತಿಂಗಳು ಮನೆ ಮಾಲೀಕರಿಗೆ ಬಾಡಿಗೆ ಪಾವತಿಸಿದ್ದಾನೆ. ಬಳಿಕ, ಕಳೆದ ಆರು ತಿಂಗಳಿಂದ ಬಾಡಿಗೆ ಪಾವತಿಸದೇ, ತನ್ನ ಕಚೇರಿಯನ್ನೂ ಖಾಲಿ ಮಾಡಿ ಪರಾರಿಯಾಗಿದ್ದಾನೆ. ಈ ವಂಚನೆಯಿಂದ ನೂರಾರು ಕುಟುಂಬಗಳು ಈಗ ಬೀದಿಗೆ ಬಿದ್ದಂತಾಗಿದೆ.
ಮನೆಗೆ ಮುಂಗಡ ಹಣ ಪಾವತಿಸಿದ ಕುಟುಂಬಗಳಿಗೆ, ಮನೆ ಮಾಲೀಕರು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇತ್ತ ಮನೆ ಬಾಡಿಗೆ ಅಥವಾ ಲೀಸ್‌ಗೆ ಕೊಟ್ಟ ಹಣವೂ ಇಲ್ಲ, ಉಳಿದುಕೊಳ್ಳಲು ಮನೆಯೂ ಇಲ್ಲದಂತ ಪರಿಸ್ಥಿತಿಗೆ ತಲುಪಿದ್ದಾರೆ.
ವಿವೇಕ್ ಕೇಶವನ್ ವಂಚಿತ ಜನರ ಮುಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ತೆಗೆದುಕೊಂಡ ಫೋಟೋಗಳನ್ನು ತೋರಿಸಿ ನಂಬಿಕೆ ಹುಟ್ಟಿಸಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಇದೀಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿ ತನಿಖೆ ಆರಂಭವಾಗಿದೆ.
ವರದಿ : ಲಾವಣ್ಯ ಅನಿಗೋಳ




