ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ₹63 ಸಾವಿರ ಕೋಟಿ ಫಿಕ್ಸ್!?

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಲಾಗುವ ತೆರಿಗೆ ಹಂಚಿಕೆ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಆದ್ರೆ 2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೀಡಲಾಗುವ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅಂದಾಜಿನ ಪ್ರಕಾರ, 2026–27ನೇ ಸಾಲಿನಲ್ಲಿ ಕರ್ನಾಟಕಕ್ಕೆ ₹63,049 ಕೋಟಿ ನಿಗದಿಪಡಿಸಲಾಗಿದೆ. ಇದಕ್ಕೆ ಹೋಲಿಸಿದರೆ, 2025–26ನೇ ಸಾಲಿನಲ್ಲಿ ರಾಜ್ಯಕ್ಕೆ ₹16,000 ಕೋಟಿ ಸಹಾಯಧನವನ್ನು ನಿಗದಿಪಡಿಸಲಾಗಿತ್ತು.

ಇದೇ ವೇಳೆ, 2014ರಿಂದ 2026ರ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ₹3.89 ಲಕ್ಷ ಕೋಟಿ ತೆರಿಗೆ ಹಂಚಿಕೆ ಮಾಡಲಾಗಿದೆ. ಅಲ್ಲದೆ ಸಹಾಯಧನ ರೂಪದಲ್ಲಿ ₹2.36 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ರಾಜ್ಯಗಳ ಬಂಡವಾಳ ವೆಚ್ಚ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 50 ವರ್ಷಗಳ ಅವಧಿಯ ಬಡ್ಡಿರಹಿತ ಸಾಲದ ರೂಪದಲ್ಲಿ ವಿಶೇಷ ನೆರವು ನೀಡುತ್ತಿದೆ.

ಈ ಸಾಲದ ಸಂಪೂರ್ಣ ಬಡ್ಡಿ ವೆಚ್ಚವನ್ನು ಕೇಂದ್ರವೇ ಭರಿಸುತ್ತಿದ್ದು, ಇದು ಹಣಕಾಸು ಆಯೋಗದ ಶಿಫಾರಸುಗಳಿಗೂ ಮೀರಿದ ನೆರವಾಗಿದೆ. 2025ರ ಜನವರಿವರೆಗೆ ಕರ್ನಾಟಕಕ್ಕೆ ಈ ಯೋಜನೆಯಡಿ ₹2,613 ಕೋಟಿ ಬಿಡುಗಡೆ ಮಾಡಲಾಗಿದೆ. 2020ರಿಂದ 2026ರ ಅವಧಿಯಲ್ಲಿ ಒಟ್ಟು ₹15,945 ಕೋಟಿ ಅನುದಾನ ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ. ರಾಜ್ಯದಲ್ಲಿ ರಸ್ತೆ ಮೂಲಸೌಕರ್ಯಕ್ಕೂ ದೊಡ್ಡ ಮಟ್ಟದ ಬಲ ಸಿಕ್ಕಿದೆ. 2025ರ ಜೂನ್ ಅಂತ್ಯದೊಳಗೆ ಕರ್ನಾಟಕದಲ್ಲಿ 8,191 ಕಿ.ಮೀ ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ.

ಭಾರತಮಾಲಾ ಪರಿಯೋಜನೆಯಡಿ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ವೇ, ಬೆಂಗಳೂರು ವರ್ತುಲ ರಸ್ತೆ, ಸೋಲಾಪುರ–ಕರ್ನೂಲ್–ಚೆನ್ನೈ ಕಾರಿಡಾರ್ ಸೇರಿದಂತೆ ಹಲವು ಗ್ರೀನ್‌ಫೀಲ್ಡ್ ಕಾರಿಡಾರ್‌ಗಳು ಕರ್ನಾಟಕದ ಮೂಲಕ ಹಾದು ಹೋಗುತ್ತಿವೆ. ಭಾರತಮಾಲಾ ಯೋಜನೆ ಹಂತ–1ರ ಅಡಿಯಲ್ಲಿ ಕರ್ನಾಟಕದಲ್ಲಿ ₹63,304 ಕೋಟಿ ಬಂಡವಾಳ ವೆಚ್ಚದೊಂದಿಗೆ 2,059 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author