ಬಿಗ್ ಬಾಸ್ ಕಾರ್ಯಕ್ರಮವು ಸಮಾಜಕ್ಕೆ, ವಿಶೇಷವಾಗಿ ಯುವಜನತೆಗೆ ತಪ್ಪು ಸಂದೇಶ ನೀಡುತ್ತಿದೆ ಎಂಬ ಆರೋಪ ಮತ್ತೆ ಗಂಭೀರವಾಗಿ ಕೇಳಿಬಂದಿದೆ. ಅನೇಕ ಸೆಲೆಬ್ರಿಟಿಗಳ ಪ್ರಕಾರ, ಈ ಶೋ ಕುಟುಂಬ ಮೌಲ್ಯಗಳನ್ನು ಹಾಳುಮಾಡುವಂತಹ ದೃಶ್ಯಗಳನ್ನು ತೋರಿಸುತ್ತಿದ್ದು, ಸಂಸ್ಕೃತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಆದರೂ, ಬಿಗ್ ಬಾಸ್‌ಗೆ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.
ತೆಲುಗು ಬಿಗ್ ಬಾಸ್ ವಿರುದ್ಧ ಸಾರ್ವಜನಿಕ ಹಾಗೂ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅವರು ಶೋವನ್ನು ತಕ್ಷಣ ನಿಲ್ಲಿಸುವಂತೆ ಬೇಡಿಕೆ ಇಟ್ಟು, ಹೈದರಾಬಾದ್ ಪೊಲೀಸರಿಗೆ ಬಿಗ್ ಬಾಸ್ ಆಯೋಜಕರು ಮತ್ತು ನಿರೂಪಕ ನಾಗಾರ್ಜುನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ನೈತಿಕ ಮೌಲ್ಯಗಳಿಲ್ಲದ ವ್ಯಕ್ತಿಗಳನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗುತ್ತಿದೆ ಎಂಬ ಆಕ್ಷೇಪವೂ ಎದುರಾಗಿದೆ. ದಿವ್ವೇಲಾ ಮಾಧುರಿ ಮತ್ತು ರಿತು ಚೌಧರಿಯಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಮೂಲಕ ಶೋ ತಪ್ಪು ಮಾದರಿಯನ್ನು ತೋರಿಸುತ್ತಿದೆ ಎಂದು ಸಂಘಟನೆಗಳು ಪ್ರಶ್ನೆ ಎತ್ತಿವೆ. ಬೇಡಿಕೆಗಳನ್ನು ಪೂರೈಸದಿದ್ದರೆ ಬಿಗ್ ಬಾಸ್ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಗೊಂದಲಗಳ ನಡುವೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಂದಿದೆ. ಜನಸೇನಾ ಪಕ್ಷದ ನಾಯಕಿಯೊಬ್ಬರು ದಿವ್ವೇಲಾ ಮಾಧುರಿ ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಲು 1 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಶೋನಲ್ಲಿ ಗೆದ್ದವರಿಗೆ ಕೇವಲ 50 ಲಕ್ಷ ರೂ. ಬಹುಮಾನ ಸಿಗುತ್ತಿದ್ದರೂ, ಮನೆಗೆ ಪ್ರವೇಶಿಸಲು 1 ಕೋಟಿ ರೂ. ಪಾವತಿಸಲಾಗಿದೆ ಎಂಬ ಈ ಹೇಳಿಕೆ ಬಿಗ್ ಬಾಸ್ ವಲಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ