Political News: ಬಿಬಿಎಂಪಿ ವ್ಯಾಪ್ತಿಯ ಪ್ರತೀ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಹಣ ಬಿಡುಗಡೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆದೇಶ ನೀಡಿದ್ದು, ಜಯನಗರ ಹೊರತುಪಡಿಸಿ, ಬೆಂಗಳೂರು ರಸ್ತೆ ಅಭಿವುೃದ್ಧಿಗೆ 10 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಈ ಆದೇಶ ಈಗ ವಿವಾದ ಹುಟ್ಟು ಹಾಕಿದೆ.
ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಇದ್ದು, ಹೀಗಾಗಿ ಡಿಸಿಎಂ ಈ ರೀತಿ ಆದೇಶ ನೀಡಿದ್ದಾರೆ. ಬಿಜೆಪಿಗೆ ಓಟ್ ಹಾಕಿದ ನಾಗರಿಕರನ್ನು ಡಿಸಿಎಂ ಶಿಕ್ಷಿಸಲು ಹೊರಟಿದ್ದಾರೆ. ಮಾತೆತ್ತಿದರೆ, ಬ್ರ್ಯಾಂಡ್ ಬೆಂಗಳೂರು ಎನ್ನುತ್ತಾರೆ. ಜಯನಗರ ಬ್ರ್ಯಾಂಡ್ ಬೆಂಗಳೂರಿನಲ್ಲಿ ಬರುವುದಿಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ತಮ್ಮ ಕ್ಷೇತ್ರಕ್ಕೆ ರಸ್ತೆ, ಚರಂಡಿ ಉದ್ಯಾನವನ ನಿರ್ವಹಣೆಗೆ ಹಣದ ಅವಶ್ಯಕತೆ ಇದೆ. ಇದೀಗ ಹಣ ಬಿಡುಗಡೆ ಮಾಡದಿರುವುದು, ಸೇಡಿನ ರಾಜಕಾರಣವನ್ನು ಮಾಡುತ್ತಿರುವ ರೀತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಭಾಗವಾಗಿರುವ ಆನೇಕಲ್ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಸೇರಿ, ಒಟ್ಟು 285 ಕೋಟಿ ರೂಪಾಯಿ ಹಣವನ್ನು ರಸ್ತೆ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ.
ಈ ಆದೇಶದ ಬಗ್ಗೆ ಬಿಬಿಎಂಪಿ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಲಾಗಿದೆ. ಎಲ್ಲಿಯೂ ತಾರತಮ್ಯ ಮಾಡಲಿಲ್ಲ. ಗೊಂದಲ ಸೃಷ್ಟಿಯಾದ ಕಾರಣ, ಈ ರೀತಿ ತಪ್ಪು ಸಂದೇಶ ಹೋಗಿದೆ. ಯಲಹಂಕ ಕ್ಷೇತ್ರಕ್ಕೆ ಎರಡು ಬಾರಿ 10 ಕೋಟಿ ಮಂಜೂರು ಎಂದು ಬರೆಯಲಾಗಿದೆ. ಹಾಗಾಗಿ ಈ ರೀತಿಯಾಗಿರಬಹುದು. ಜಯನಗರ ಬರೆಯುವ ಬದಲು ಇನ್ನೊಮ್ಮೆ ಯಲಹಂಕ ಎಂದು ಬರೆದಿರಬಹುದು. ಅದನ್ನು ಸರಿಪಡಿಸಿ, ಎಲ್ಲ ಕ್ಷೇತ್ರಗಳ ರಸ್ತೆ ಅಭಿವೃದ್ಧಿ ಹಣ ಮಂಜೂರು ಮಾಡಲಾಗುತ್ತದೆ ಎಂದಿದ್ದಾರೆ.