ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೇಮಕ್ಕೆ ತಿರುಗಿ ಕೇವಲ ಹತ್ತೇ ದಿನಗಳಲ್ಲಿ ಕೊಲೆಗಾಗಿ ಮುಕ್ತಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಈ ಭಯಾನಕ ಘಟನೆ ಇಡೀ ಮಂಡ್ಯ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ಚಿನ್ನಾಭರಣ ದೋಚಿದ ಘಟನೆ, ಕೆ.ಆರ್. ಪೇಟೆ ತಾಲ್ಲೂಕಿನ ಕರೋಟಿ ಗ್ರಾಮದಲ್ಲಿ ದಾಖಲಾಗಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮ ನಿವಾಸಿ, 35 ವರ್ಷದ ಪ್ರೀತಿ ಎಂಬ ಮಹಿಳೆ, ಪುನೀತ್ ಎಂಬ ಯುವಕನನ್ನು ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡಿದ್ದರು. ಪ್ರೀತಿ, ಮದುವೆ ಆಗಿ, ಎರಡು ಮಕ್ಕಳ ತಾಯಿಯಾಗಿದ್ದಳು. ಆದರೂ ಕೂಡ ಆಕೆ ಇತ್ತೀಚೆಗೆ ಮಂಡ್ಯ ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದ ಪುನೀತ್ ಜೊತೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಳು.
ಪ್ರೀತಿ, ಪುನೀತ್ನನ್ನ ಲವ್ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ. ಅದೇರೀತಿ ಭಾನುವಾರದಂದು ಇಬ್ಬರೂ ಒಟ್ಟಿಗೆ ಮೈಸೂರು, ಮಂಡ್ಯದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಖುಷಿ ಖುಷಿಯಾಗಿ ಸಮಯ ಕಳೆಯುತ್ತಿದ್ದರು. ಆ ಸಮಯದಲ್ಲಿ ಪ್ರೀತಿಯ ಫೋನ್‌ಗೆ ಆಗುವ ಕರೆಗಳಿಂದ ಪುನೀತ್‌ಗೆ ಅನುಮಾನದ ಮೂಡಿತ್ತು. ಇದೇ ಕಾರಣಕ್ಕೆ ಅವರ ನಡುವೆ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಜಗಳವಾಗಿದ್ದು, ಕೊನೆಗೆ ಪುನೀತ್ ಆಕೆಯನ್ನ ಕೊಲೆಮಾಡಿದ್ದಾನೆ.
ಕೊಲೆ ಬಳಿಕ ಪ್ರೀತಿಯ ಮೈಮೇಲೆ ಇದ್ದ ಚಿನ್ನಾಭರಣ ದೋಚಿ, ತನ್ನದೇ ಗ್ರಾಮದ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದಾನೆ. ಈ ಘಟನೆ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಪ್ರೀತಿಯ ಕುಟುಂಬ ಹಾಗೂ ಗ್ರಾಮಸ್ಥರು ಈ ದುರ್ಘಟನೆಯಿಂದ ನೊಂದುಕೊಂಡಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳ ಮೂಲಕ ನಿರ್ಲಕ್ಷ್ಯವಾಗಿ ಬೆಳೆಯುವ ಸಂಬಂಧಗಳ ಅಪಾಯವನ್ನು ಒತ್ತಿ ಹೇಳುತ್ತಿದೆ.