ಹೆಣ್ಣು ಮಕ್ಕಳು ಸಿಗದ ರೈತ ಮಕ್ಕಳಿಗೆ 10 ಲಕ್ಷ!

ರೈತರ ಮಕ್ಕಳಿಗೆ ವಿವಾಹಕ್ಕೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪವಾಗಿ ಕೆಲಕಾಲ ಸದನವನ್ನು ನಗೆ ಕಡಲಿನಲ್ಲಿ ತೇಲುವಂತೆ ಮಾಡಿತು. ರಾಜ್ಯದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲ ಎಂಬ ಅಸಾಮಾನ್ಯ ಸ್ಥಿತಿಯನ್ನು ಉಲ್ಲೇಖಿಸಿ, ಈ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪುಟ್ಟಣ್ಣ, ರೈತರ ಮಕ್ಕಳಿಗೆ ಹೆಣ್ಣು ಸಿಗದ ಪರಿಸ್ಥಿತಿ ರಾಜ್ಯದ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಮುಂದಾಗಿ ರೈತರ ಮಕ್ಕಳ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಮಕ್ಕಳ ಖಾತೆಗೆ 10 ಲಕ್ಷ ರೂ. ಜಮಾ ಮಾಡಬೇಕು ಎಂಬ ಸಲಹೆಯನ್ನು ಸಹ ಅವರು ಸದನದ ಮುಂದೆ ಇಟ್ಟರು.

ಇದೇ ವಿಷಯ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗುತ್ತಿದ್ದು, ರೈತರ ಮಕ್ಕಳ ವಿವಾಹಕ್ಕಾಗಿ ತಾಲೂಕುವಾರು ಮಠಗಳು ಅಥವಾ ವ್ಯವಸ್ಥಿತ ವೇದಿಕೆಗಳನ್ನು ಸರ್ಕಾರವೇ ನಿರ್ಮಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ಪುಟ್ಟಣ್ಣ ಗಮನ ಸೆಳೆದರು.

ಕೆಲವರು ಈಗಾಗಲೇ ಹೆಣ್ಣು ಸಿಗಲೆಂದು ಮಲೆಮಹದೇಶ್ವರ ಹಾಗೂ ಧರ್ಮಸ್ಥಳದಂತಹ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿರುವ ಉದಾಹರಣೆಗಳನ್ನೂ ಅವರು ಉಲ್ಲೇಖಿಸಿದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಪುಟ್ಟಣ್ಣ ಅವರ ಮಾತಿಗೆ ಬೆಂಬಲ ಸೂಚಿಸಿದರು. ಸರ್ಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಬೋಸರಾಜ್, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವುದಾಗಿ ಸದನಕ್ಕೆ ಭರವಸೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author