KMF ನಿಂದ 10 ಹೊಸ ಉತ್ಪನ್ನಗಳ ಲಾಂಚ್

ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ನಂದಿನಿ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ ₹10 ಮೌಲ್ಯದ ಪ್ಯಾಕೆಟ್‌ನಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ ಈ ಹೊಸ ಉಪಕ್ರಮವನ್ನು ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿ ಬ್ರ್ಯಾಂಡ್‌ನ 10 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಈ ಪೈಕಿ ₹10 ಮೌಲ್ಯದ ಹಾಲು ಮತ್ತು ಮೊಸರು ಪ್ಯಾಕೆಟ್‌ಗಳ ಜೊತೆಗೆ ಮೀಡಿಯಂ ಫ್ಯಾಟ್ ಪನ್ನೀರ್, ಹೈ ಅರೋಮಾ ತುಪ್ಪ, ಪ್ರೊಬಯಾಟಿಕ್ ಮಾವಿನ ಲಸ್ಸಿ, ಡೇರಿ ವೈಟ್ನರ್ ಸೇರಿದಂತೆ ಒಟ್ಟು ಹತ್ತು ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸಿವೆ. KMF ಮಾಹಿತಿಯಂತೆ, ನಂದಿನಿ ಹಾಲು 160 ml ಪ್ಯಾಕೆಟ್‌ಗೆ ₹10 ಮತ್ತು ಮೊಸರು 140 ml ಪ್ಯಾಕ್‌ಗೆ ₹10 ದರದಲ್ಲಿ ಲಭ್ಯವಾಗಲಿದೆ. ಇದುವರೆಗೆ 200 ml ಪ್ಯಾಕೆಟ್ ಮಾತ್ರ ಮಾರುಕಟ್ಟೆಯಲ್ಲಿತ್ತು.

ಕೆಲ ಸಂದರ್ಭಗಳಲ್ಲಿ ಮನೆಯಲ್ಲೊಬ್ಬರೇ ಇದ್ದಾಗ 200 ml ಹಾಲು ಅಥವಾ ಮೊಸರು ಬಳಕೆಯಾಗದೆ ಉಳಿಯುತ್ತಿತ್ತು. ಇದರಿಂದ ಹಳೆಯ ಹಾಲು ಸಂಗ್ರಹಿಸುವ ಸಮಸ್ಯೆ ಉಂಟಾಗುತ್ತಿತ್ತು.ಈ ಸಮಸ್ಯೆಗೆ ಪರಿಹಾರವಾಗಿ, ದಿನಕ್ಕೆ ಅಗತ್ಯವಿರುವಷ್ಟು ಮಾತ್ರ ಹಾಲು ಅಥವಾ ಮೊಸರು ಖರೀದಿಸಲು ಅನುಕೂಲವಾಗುವಂತೆ ಕಡಿಮೆ ಪ್ರಮಾಣದ ಪ್ಯಾಕೆಟ್‌ಗಳನ್ನು ಪರಿಚಯಿಸಲಾಗಿದೆ. ಇದರಿಂದ ತಾಜಾ ಉತ್ಪನ್ನಗಳ ಬಳಕೆಗೂ ಉತ್ತೇಜನ ಸಿಗಲಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ಇಂದು KMFನ ಗುಡ್ ಲೈಫ್ ತುಪ್ಪ, ಪನ್ನೀರ್, ಪ್ರೊ ಮಿಲ್ಕ್, ಪ್ರೊಬಯಾಟಿಕ್ ಮೊಸರು ಸೇರಿದಂತೆ ಆರೋಗ್ಯಪೂರ್ಣ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ತನ್ನ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾದ ನಂದಿನಿ ಉತ್ಪನ್ನಗಳಿಗೆ ದೇಶ–ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ತಯಾರಿಸುತ್ತಿರುವ ಏಕೈಕ ಸಂಸ್ಥೆ ನಮ್ಮ ನಾಡಿನ KMF ನಂದಿನಿ ಎನ್ನಲು ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

About The Author