ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ಹಣದಲ್ಲಿ 100 ಕೋಟಿ ರೂ.ಕ್ಕೂ ಅಧಿಕ ಲೂಟಿ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಮಾಡಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿರುವ ಭಾನು ಪ್ರಕಾಶ್, ದೇವಸ್ಥಾನದ ಸಿಬ್ಬಂದಿ ರವಿಕುಮಾರ್ ಪರಕಾಮಣಿಯ ಕಾಣಿಕೆ ಪೆಟ್ಟಿಗೆಯಿಂದ ಹಣವನ್ನು ದೋಚಿದ್ದಾರೆಂದು ಆರೋಪಿಸಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿರುವ ಅವರು, ಲೂಟಿ ಮಾಡಿದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ಜಗನ್ ರೆಡ್ಡಿಯವರ ತಾಡೆಪಲ್ಲಿ ನಿವಾಸಕ್ಕೆ ವರ್ಗಾಯಿಸಲಾಗಿದೆ ಎಂಬುದೂ ಆರೋಪವಾಗಿದೆ.
2019 ರಿಂದ 2024ರವರೆಗೆ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಟಿಟಿಡಿ ಇತಿಹಾಸದಲ್ಲೇ ಅತ್ಯಧಿಕ ಹಣ ಲೂಟಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ದೃಶ್ಯಾವಳಿಗಳನ್ನು ಟಿಡಿಪಿ ನಾಯಕ ನಾರಾ ಲೋಕೇಶ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪ್ರಕರಣವನ್ನು ಹೈಕೋರ್ಟ್ ಈಗ ಸಿಐಡಿಗೆ ವಹಿಸಿದೆ. ಒಂದು ತಿಂಗಳೊಳಗೆ ತನಿಖೆ ನಡೆಸಿ, ಮುಚ್ಚಿದ ವರದಿಯನ್ನು ಸಲ್ಲಿಸಲು ಆದೇಶ ನೀಡಲಾಗಿದೆ. ಮಂಡಳಿಯ ನಿರ್ಧಾರಗಳು ಹಾಗೂ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಭಾನು ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ