Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮಹಾತ್ಮಾಗಾಂಧಿ ಸ್ವಾತಂತ್ರ ಸಂಗ್ರಾಮ ಆರಂಭಿಸಿ 100 ವರ್ಷವಾಗಿರುವ ಹಿನ್ನೆಲೆ, ಈ ಬಾರಿ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಬೇಕು ಎಂದುಕೊಂಡಿದ್ದೇವೆ ಎಂದಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರು ನಮ್ಮ ಆಸ್ತಿ. ಅವರ ತತ್ವ ಸಿದ್ಧಾಂತಗಳು ಅನುಕರಣೀಯ. ಮುಂದಿನ ಪೀಳಿಗೆಗೂ ಕೂಡ ಅವರ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ಈ ಸಾರಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಅಕ್ಟೋಬರ್ 2ರ ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ಗಾಂಧಿ ಪ್ರತಿಮೆಯರೆಗೆ “ಗಾಂಧೀ ನಡಿಗೆ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗಾಂಧೀಜಿ ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಲಾಗುವುದು. ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಗುವುದು. ಇಲ್ಲಿಂದ ಎಲ್ಲ ಶಾಲೆಗಳಿಗೆ ಝೂಂ ಕನೆಕ್ಷನ್ ನೀಡಲಾಗಿರುತ್ತದೆ ಎಂದು ಡಿಸಿಎಂ ಹೇಳಿದರು.
ಎಲ್ಲಾ ನಾಯಕರು ಪಕ್ಷಬೇಧ, ಜಾತಿಬೇಧ ಮರೆತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಮಾತ್ರ ಅನುಮತಿ ಇದೆ. ಕನ್ನಡ ಧ್ವಜ, ಕಾಂಗ್ರೆಸ್ ಧ್ವಜಗಳಿಗೆ ಅವಕಾಶವಿರುವುದಿಲ್ಲ. ನಡಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಗಾಂಧಿ ಟೋಪಿ ಧರಿಸಿ ಧ್ವಜ ಕೈಯಲ್ಲಿ ಹಿಡಿದು ಹೆಜ್ಜೆ ಹಾಕಲಿದ್ದಾರೆ. ರಾಜ್ಯದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು ಒಂದು ಆಪ್ ಸಿದ್ಧಪಡಿಸಲಾಗಿದ್ದು, ಈಗಾಗಲೇ 35 ಸಾವಿರ ಮಂದಿ ಈ ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಜ್ಞಾ ವಿಧಿ ಪಡೆದವರಿಗೆ ಆನ್‌ಲೈನ್‌ನಲ್ಲೇ ಪ್ರಮಾಣಪತ್ರ ನೀಡಲಾಗುವುದು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ಇಡೀ ವರ್ಷ ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಅದೇ ದಿನ ಬೆಳಗ್ಗೆ 11 ಗಂಟೆಗೆ ಇಡೀ ರಾಜ್ಯದ ಉದ್ದಗಲಕ್ಕೂ ಕೂಡ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ವತಿಯಿಂದ ನಡೆಸಲಾಗುವ ಪಾದಯಾತ್ರೆಯು ಭಾರತ್ ಜೋಡೊ ಭವನ ತಲುಪಲಿದ್ದು, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಡಿಸಿಎಂ ಡಿಕೆಶಿ ಹೇಳಿದರು.