1.ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ,ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಆರೋಪ
ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಲಕ್ಷ್ಮೀದೇವಿ ನಗರ ವಾರ್ಡ್ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ, ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಮುನಿರತ್ನ ಮೇಲೂ ಮೊಟ್ಟೆ ಎಸೆಯಲಾಗಿದೆ. ತಮ್ಮ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮುಂದಾಗಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ. ಸ್ಥಳಕ್ಕೆ ನಂದಿನಿ ಲೇಔಟ್ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ರಸ್ತೆಯಲ್ಲೇ ಕುಳಿತು ಶಾಸಕ ಮುನಿರತ್ನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಧ್ಯೆ ಮುನಿರತ್ನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಾರನ್ನು ಜಖಂಗೊಳಿಸಿರುವ ಆರೋಪ ಕೇಳಿಬಂದಿದೆ. ಸ್ಥಳದಿಂದ ಬಿಜೆಪಿ ಶಾಸಕ ಮುನಿರತ್ನ ತೆರಳಿದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, 2-3 ಕಾರುಗಳು ಜಖಂಗೊಂಡಿವೆ. ಹಲವರು ಗಾಯಗೊಂಡಿದ್ದಾರೆ.ದಾಳಿ ಬಳಿಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲೆ ಆಸಿಡ್ ಇರೋ ಮೊಟ್ಟೆ ಎಸೆದಿದ್ದಾರೆ, ನನ್ನನ್ನು ಕೊಲ್ಲುವ ಪ್ರಯತ್ನ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ.. ಇನ್ನು ಈ ಘಟನೆಗೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಹಾಗೂ ಹನುಮಂತರಾಯಪ್ಪ ಕಾರಣ ಎಂದು ಆರೋಪಿಸಿದ್ದಾರೆ.. ನನ್ನನ್ನು ಕೊಲೆ ಮಾಡಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸುರೇಶ್ ಯತ್ನಿಸುತ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
2. ಮಾಡಿದ್ದುಣ್ಣೋ ಮಹಾರಾಯ ,ಮುನಿರತ್ನಗೆ ಕುಸುಮಾ ಟಾಂಗ್
ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಮೊಟ್ಟೆ ಜೊತೆ ಆ್ಯಸಿಡ್ ದಾಳಿಯೂ ಆಗಿದೆ ಅಂತ ಆರೋಪಿಸಿರುವ ಮುನಿರತ್ನ, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದರ ನಡುವೆ ನನ್ನ ಪ್ರಾಣಕ್ಕೆ ಏನಾದರೂ ಆದರೆ ಅದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ , ಅವರ ಸಹೋದರ ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರೇ ಹೊಣೆ ಅಂತ ಗಂಭೀರ ಆರೋಪ ಮಾಡಿದ್ದರು. ಇದೀಗ ಮುನಿರತ್ನ ಆರೋಪಕ್ಕೆ ಕುಸುಮಾ ಹನುಮಂತರಾಯಪ್ಪ ಟಾಂಗ್ ನೀಡಿದ್ದಾರೆ. ಮುನಿರತ್ನ ಆರೋಪಕ್ಕೆ ಕುಸುಮಾ ಹನುಮಂತರಾಯಪ್ಪ ತಿರುಗೇಟು ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು, ಶಾಸಕ ಮುನಿರತ್ನ ಅವರ ಮೇಲಿನ “ಮೊಟ್ಟೆ ಅಟ್ಯಾಕ್” ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ ಅಂತ ವ್ಯಂಗ್ಯವಾಡಿದ್ದಾರೆ.ದಲಿತರನ್ನು ತುಚ್ಚವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ FSL ರಿಪೋರ್ಟ್‌ನಲ್ಲಿ ಅವರದ್ದೇ ಎಂದು ಸಾಬೀತಾದ ಬೆನ್ನಲ್ಲೇ ತರಹೇವಾರಿ ನಾಟಕಗಳು ಶುರುವಾಗಿದೆ. ಜನರೆದುರು ತನ್ನ ನಿಜರೂಪ ಬೆತ್ತಲಾದ ನಂತರ ಸಿಂಪತಿ ಗಿಟ್ಟಿಸಿಕೊಳ್ಳಲು “ಇಮೇಜ್ ಬಿಲ್ಡಿಂಗ್” ಆಕ್ಟಿವಿಟಿಯ ಒಂದು ಭಾಗವೇ ಇಂದಿನ ಪ್ರಹಸನಗಳು ಅಂತ ಕುಸುಮಾ ಟಾಂಗ್ ಕೊಟ್ಟಿದ್ದಾರೆ.ಈತನ ಸ್ಕ್ರಿಪ್ಟೆಡ್ ಸ್ಟೋರಿಗಳು ಅಲ್ಪ ವಿರಾಮದ ಬಳಿಕ ಮತ್ತೆ ಚಾಲ್ತಿಗೆ ಬಂದಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಆದ್ಯತೆಯೇ ಕಡಿಮೆ ಇಂತಹ ಸನ್ನಿವೇಶದಲ್ಲಿ ಸ್ವಚ್ಚ ರಾಜಕಾರಣದ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕನಸುಗಳಿಗೆ ಬೆಲೆಯಿಲ್ಲವೆನಿಸುತ್ತದೆ. ಈ ನಾಟಕಗಳನ್ನು ಗಮನಿಸಿದರೆ ಕೊಚ್ಚೆಯಲ್ಲಿ ಹೊರಳಾಡುವ ಹಂದಿಯ ಜೊತೆ ಹಂದಿಗಳಾಗಿಯೇ ಇರಬೇಕಾ ಎಂಬ ಪ್ರಶ್ನೆಯ ಜೊತೆ ಅಸಹ್ಯ ಮೂಡುತ್ತಿದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈತನ ಪಾಪದ ಕೆಲಸಗಳಿಗೆ ತಕ್ಕ ಶಾಸ್ತಿ ಆಗೇ ಆಗುತ್ತದೆ, ಆದರೆ ತನ್ನ ತಪ್ಪು ಮುಚ್ಚಿಕೊಳ್ಳಲು ನನ್ನ ಹೆಸರನ್ನು ವಿನಾಕಾರಣ ಎಳೆದು ತರುವುದು ಎಷ್ಟು ಸರಿ? ಈತನ ಕತೆಗಳನ್ನು ನಂಬುವಷ್ಟು ನಮ್ಮ ಜನರು ದಡ್ಡರೂ, ಮೂರ್ಖರೂ ಅಲ್ಲ. ಕಾಲಾಯ ತಸ್ಮೈ ನಮಃ! ಅಂತ ಟ್ವೀಟ್ ಮೂಲಕ ಕುಸುಮಾ ಹನುಮಂತರಾಯಪ್ಪ ಕಿಡಿಕಾರಿದ್ದಾರೆ.
3. ಶಾಸಕ ಮುನಿರತ್ನಗೆ ಡಿಕೆ. ಸುರೇಶ್ ತಿರುಗೇಟು ,ಗಲಾಟೆ ಮಾಡಿಸಿ ನನ್ನ ಮೇಲೆ ಸುಳ್ಳು ಆರೋಪ
ಶಾಸಕ ಮುನಿರತ್ನ ಅವರೇ ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಮುಂದಾಗಿದ್ದಾರೆ ಅಂತ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವೇಳೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿ.ಕೆ ಸುರೇಶ್, ಡಿಕೆ ಶಿವಕುಮಾರ್ ಅವರ ಕಡೆಯವರಿಂದ ದಾಳಿ ನಡೆದಿದೆ ಎಂಬ ಮುನಿರತ್ನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನನಗೆ ಆ ವಿಚಾರ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಅವರೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ ಎಂದು ಹೇಳಿದ್ದಾರೆ.ಅವರ ವ್ಯಕ್ತಿತ್ವ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿಯವರಿಗಾಗಲಿ, ಬೇರೆಯವರಿಗಾಗಲಿ ನನ್ನ ವಿರುದ್ಧ ಮಾತಾಡುವ ನೈತಿಕತೆ ಇಲ್ಲ ಅಂತ ಕಿಡಿಕಾರಿದ್ದಾರೆ. ಕುಸುಮ ಅವರನ್ನು ಎಂಎಲ್‌ಎ ಮಾಡುವ ನಿಟ್ಟಿನಲ್ಲಿ ಈ ರೀತಿ ಮಾಡ್ತಿದ್ದಾರೆ ಎಂಬ ಆರೋಪಕ್ಕೆ, ಬೆಂಗಳೂರಿಗೆ ಬಂದ ಮೇಲೆ ಮಾತಾಡ್ತೀನಿ ಎಂದು ಶಾಸಕರಿಗೆ ಹೇಳಿ ಅಂತ ತೆರಳಿದ್ದಾರೆ.
4. ಸಿಟಿ ರವಿ ಬಂಧನ ಕೇಸ್ ,ಸಿಪಿಐನ ಅಮಾನತು
ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಖಾನಾಪುರ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ. ಆದ್ರೆ, ಏಕೆ ಅಮಾನತು ಮಾಡಲಾಗಿದೆ ಎನ್ನುವ ಚರ್ಚೆಗಳು ಶುರುವಾಗಿವೆ. ಸಿಟಿ ರವಿ ಅವರನ್ನು ಅರೆಸ್ಟ್ ಮಾಡಿ ಬಳಿಕ ನಡೆದುಕೊಂಡ ರೀತಿಗೆ ಅಮಾನತ್ತು ಮಾಡಲಾಗಿದ್ಯಾ? ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಅಸಲಿಗೆ ಖಾನಾಪುರ ಇನ್ಸ್‌ಪೆಕ್ಟರ್ ಮತ್ತು ಸಿಟಿ ರವಿಗೂ ಸಂಬಂಧವೇ ಇಲ್ಲ. ರವಿ ಅವರನ್ನು ಕಮಿಷನರೇಟ್ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದದ್ದರು. ಖುದ್ದು ಬೆಳಗಾವಿ ಕಮಿಷನರ್, ಡಿಸಿಪಿಯೊಂದಿಗೆ ಸಿ ಟಿ ರವಿ ಬಂದಿದ್ದರು. ಕಮಿಷನರ್ ತಂದ ಆರೋಪಿಗೆ ಖಾನಾಪುರ ಇನ್ಸ್‌ಪೆಕ್ಟರ್ ಆಶ್ರಯ ನೀಡಿದ್ದರು. ಆಶ್ರಯ ಕೊಟ್ಟ ತಪ್ಪಿಗೆ ಅಮಾನತು ಶಿಕ್ಷೆಯೇ? ಈ ಮೂಲಕ ಕಿರಿಯ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳ ಸವಾರಿ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪೊಲೀಸ್ ಠಾಣೆಯಲ್ಲಿ ಬಿಜೆಪಿಗರಿಗೆ ಸಭೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸಭೆ ಮಾಡಲು ಅವಕಾಶ ಕೊಟ್ಟರು. ಠಾಣೆಯಲ್ಲಿ ಬಿಜೆಪಿಯವರು ಬಂದು ಸಭೆ ಮಾಡಬಹುದಾ? ಹಾಗಾಗಿ ಸಿಪಿಐ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
5.ಬೆಳಗಾವಿಯಲ್ಲಿ ಗಾಂಧಿ ಭಾರತ ,2 ದಿನ ಶಾಲೆಗಳಿಗೆ ರಜೆ ಘೋಷಣೆ
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು, ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಡಿಸೆಂಬರ್ 26 ಮತ್ತು 27 ಎರಡು ದಿನ ರಜೆ ಘೋಷಣೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಗುರುವಾರ ಸಂಜೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಖರ್ಗೆ ಅವರೇ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಇನ್ನು ಗುರುವಾರ ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಿದ್ದು ಫೋಟೋ ಸೆಷನ್ ಕೂಡ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂಬಿ ಪಾಟೀಲ್ ಸೇರಿ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, 140 ಸಂಸದರು ಬೆಳಗಾವಿಗೆ ಆಗಮಿಸಲಿದ್ದು, ಪ್ರಮುಖ ನಾಯಕರಿಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.
6. ದೇಶದ ಮೊದಲ ನದಿ ಜೋಡಣೆ ಶುರು,ಮಧ್ಯಪ್ರದೇಶ-ಉತ್ತರ ಪ್ರದೇಶಕ್ಕೆ ನೀರು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮದಿನದ ಸಂದರ್ಭದಲ್ಲಿ , ಇಂದು ಮಧ್ಯಪ್ರದೇಶದಲ್ಲಿ ಕೆನ್-ಬೇತ್ವಾನದಿ ಜೋಡಣೆ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.ಕೆನ್-ಬೇತ್ವಾ ನದಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಯೋಜನೆಯು ರಾಷ್ಟ್ರೀಯ ದೃಷ್ಟಿಕೋನ ಯೋಜನೆಯಡಿಯಲ್ಲಿ ದೇಶದ ಮೊದಲ ನದಿಗಳನ್ನು ಜೋಡಿಸುವ ಯೋಜನೆಯಾಗಿದೆ. ಈ ಯೋಜನೆಯು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿ ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಿಂದ ಈ ಭಾಗದ ಜನರಿಗೆ ಕುಡಿಯುವ ನೀರಿನ ಸೌಲಭ್ಯವೂ ದೊರೆಯಲಿದೆ. ಕಳೆದ 1 ವರ್ಷದಲ್ಲಿ ಅಭಿವೃದ್ಧಿಗೆ ಹೊಸ ಗತಿ ಸಿಕ್ಕಿದೆ.ಇಂದು ಕೋಟ್ಯಂತರ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಶಂಕುಸ್ಥಾಪನೆ ಮಾಡಲಾಗಿದೆ.ಇಂದು ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೂ ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 100 ವರ್ಷಗಳ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿರುವ ಈ ಯೋಜನೆಗಳಿಗಾಗಿ ನಾನು ರಾಜ್ಯದ ಜನತೆಯನ್ನು ಅಭಿನಂದಿಸುತ್ತೇನೆ ಆಡಳಿತ… ಉತ್ತಮ ಆಡಳಿತವೇ ಬಿಜೆಪಿಯ ಗುರುತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
7. ವಕ್ಫ್ ತಿದ್ದುಪಡಿ ಮಸೂದೆ, ಅಧಿಕಾರಿಗಳು ಸಮಿತಿ ಮುಂದೆ ಹಾಜರು
ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದದ ನಡುವೆ, ರಾಜ್ಯ ಸರ್ಕಾರದ ಅಧಿಕಾರಿಗಳು ಗುರುವಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಮುಂದೆ ಹಾಜರಾಗಲು ನಿರ್ಧರಿಸಿದ್ದಾರೆ. ಬಿಜೆಪಿ ಸದಸ್ಯ ಜಗದಾಂಬಿಕಾ ಪಾಲ್ ಅವರ ಅಧ್ಯಕ್ಷತೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿಯು ಗುರುವಾರದಿಂದ ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಮತ್ತು ದೆಹಲಿ ಸರ್ಕಾರಗಳ ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಲಿದೆ. ದೆಹಲಿ ಆಹಾರ ಮತ್ತು ಸರಬರಾಜು ಸಚಿವ ಇಮ್ರಾನ್ ಹುಸೇನ್ ಅವರು ಶುಕ್ರವಾರ ಸಮಿತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ದೆಹಲಿ ಸರ್ಕಾರದ ಪ್ರತಿನಿಧಿಗಳು ಸಾಕ್ಷ್ಯವನ್ನು ದಾಖಲಿಸಿದ್ದಾರೆ. ರಾಜ್ಯದಲ್ಲಿ ರೈತರ 1500 ಎಕರೆಗೂ ಹೆಚ್ಚು ಭೂಮಿಯನ್ನು ವಕ್ಫ್ ಬೋರ್ಡ್ ವಶಪಡಿಸಿಕೊಳ್ಳುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಅಧಿಕಾರಿಗಳಿಗೆ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ವಕ್ಫ್ ಆಸ್ತಿ ವಿವಾದದ ನಂತರ ಜಗದಾಂಬಿಕಾ ಪಾಲ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದರು ಮತ್ತು ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಸಂಬಂಧ ರಾಜ್ಯ ಸರ್ಕಾರದಿಂದ ನೋಟಿಸ್ ಪಡೆದಿದ್ದ ರೈತರೊಂದಿಗೆ ಸಂವಾದ ನಡೆಸಿದ್ದರು.
8. ಸಿಎಂ ಅತಿಶಿಯನ್ನು ಬಂಧಿಸಬಹುದು!, ಕೇಜ್ರಿವಾಲ್ ಗಂಭೀರ ಆರೋಪ
ಸಂಜೀವಿನಿ, ಮಹಿಳಾ ಸಮ್ಮಾನ್‌ನಂತಹ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡುತ್ತಿದ್ದು, ಇದನ್ನು ಸಹಿಸಲಾಗದ ಜನರು ಮುಖ್ಯಮಂತ್ರಿ ಅತಿಶಿ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲವು ದಿನಗಳ ಹಿಂದೆ ಇಡಿ, ಐಟಿ ಮತ್ತು ಸಿಬಿಐ ಅಧಿಕಾರಿಗಳ ಸಭೆ ನಡೆದಿದೆ. ಮೇಲಿನಿಂದ ಸಿಎಂ ಅತಿಶಿ ಬಂಧಿಸಲು ಅವರಿಗೆ ಆದೇಶ ಬಂದಿದೆ ಎಂದು ನನ್ನ ಮೂಲಗಳಿಂದ ತಿಳಿದುಬಂದಿದೆ. ನಾನು ಸಂಪೂರ್ಣ ಜವಾಬ್ದಾರಿಯಿಂದ ಈ ಗಂಭೀರ ಆರೋಪ ಮಾಡುತ್ತಿದ್ದೇನೆ ಎಂದು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಯಾವುದೇ ಕೆಲಸವಿಲ್ಲ. ಅವರು ಕೇಜ್ರಿವಾಲ್ ಅವರನ್ನು ಟೀಕಿಸುವ ಮತ್ತು ನಿಂದಿಸುವ ಮೂಲಕ ಮತ ಕೇಳುತ್ತಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷವು ತಾನು ಮಾಡಿದ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದೆ. ನಾವು ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಿದ್ದೇವೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಯೋಜನೆಯನ್ನು ಘೋಷಿಸಿದ್ದೇವೆ. ಈ ಯೋಜನೆಗಳ ನೋಂದಣಿಯಿಂದ ಬಿಜೆಪಿಗೆ ತೊಂದರೆಯಾಗಿದೆ ಎಂದರು. ದೆಹಲಿ ಮುಖ್ಯಮಂತ್ರಿ ಅತಿಶಿ ಮಾತನಾಡಿ, ದೆಹಲಿಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣವನ್ನು ತಡೆಯಲು ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾವು ಇಲ್ಲಿಯವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಹಾಗಾಗಿ ಅವರ ಏಜೆನ್ಸಿಗಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದರೆ, ಅಂತಿಮವಾಗಿ ಸತ್ಯಕ್ಕೆ ಜಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಸುಳ್ಳು ಪ್ರಕರಣದ ನಂತರವೂ ನಮಗೆ ಜಾಮೀನು ಸಿಗುತ್ತದೆ ಎಂಬ ನ್ಯಾಯ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ. ದೆಹಲಿಯ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ದೆಹಲಿಯ ಜನ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
9. ಮೃತರ ಕುಟುಂಬಕ್ಕೆ 2ಕೋಟಿ ಪರಿಹಾರ ,ಪರಿಹಾರ ಘೋಷಿಸಿದ ಅಲ್ಲು ಅರ್ಜುನ್ ತಂದೆ
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರವನ್ನು ಅಲ್ಲು ಅರವಿಂದ್ ಘೋಷಿಸಿದ್ದಾರೆ. ಡಿ.4ರಂದು ‘ಪುಷ್ಪ 2’ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತ ರೇವತಿ ಪುತ್ರ ಶ್ರೀಜಾ ಕೂಡ ತೀವ್ರ ಗಂಭೀರ ಸ್ಥಿತಿಯಲ್ಲಿದ್ದು, ಈಗಾಗಲೇ ಅಲ್ಲು ಅರ್ಜುನ್ ತಂದೆ ಕುಟುಂಬಸ್ಥರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಈ ಹಿಂದೆ 25 ಲಕ್ಷ ರೂ. ಕೊಡೋದಾಗಿ ತಿಳಿಸಿದ್ದರು. ಆದರೆ ಈಗ ಮೃತಪಟ್ಟ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡೋದಾಗಿ ಅಲ್ಲು ಅರವಿಂದ್ ತಿಳಿಸಿದ್ದಾರೆ. ಅಲ್ಲು ಅರ್ಜುನ್ ಕಡೆಯಿಂದ 1 ಕೋಟಿ ರೂ. ಜೊತೆಗೆ ‘ಪುಷ್ಪ 2’ ನಿರ್ಮಾಪಕರು ಮತ್ತು ನಿರ್ದೇಶಕ ಸುಕುಮಾರ್ ಕಡೆಯಿಂದ 1 ಕೋಟಿ ರೂ.ವನ್ನು ಮೃತ ಮಹಿಳೆ ಕುಟುಂಬಕ್ಕೆ ಕೊಡಲು ನಿರ್ಧರಿಸಿದ್ದಾರೆ. ಅಂದಹಾಗೆ, ಡಿ.13ರಂದು ಕಾಲ್ತುಳಿತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದರು. ಬೇಲ್ ಸಿಕ್ಕ ಹಿನ್ನೆಲೆ ನಟ ರಿಲೀಸ್ ಆಗಿದ್ದರು. ನಿನ್ನೆಯಷ್ಟೇ (ಡಿ.24) ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ನಟ ಸತತ 4 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಬಂದಿದ್ದರು.
===============================