ರಷ್ಯಾ-ಉಕ್ರೇನ್ ಸಂಘರ್ಷ ತೀವ್ರಗೊಂಡಿದ್ದು, ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದೆ. ರಷ್ಯಾ ಭಾನುವಾರ ರಾತ್ರಿ ಉಕ್ರೇನ್‌ನ ಕೈವ್ ಸೇರಿದಂತೆ ಹಲವು ನಗರಗಳ ಮೇಲೆ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ 600ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಅನೇಕ ಕ್ಷಿಪಣಿಗಳನ್ನು ಹಾರಿಸಲಾಯಿತು. ಕೈವ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದು, 12 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ದಾಳಿಯನ್ನು ಸಾಮಾನ್ಯ ನಗರಗಳ ವಿರುದ್ಧ ಉದ್ದೇಶಿತ ಭಯೋತ್ಪಾದನೆ ಎಂದು ಖಂಡಿಸಿದ್ದಾರೆ. ಉಕ್ರೇನ್ ವಿದೇಶಾಂಗ ಸಚಿವಾಲಯವು ವಸತಿ ಕಟ್ಟಡಗಳು, ಹೃದ್ರೋಗ ಆಸ್ಪತ್ರೆ ಹಾಗೂ ಶಿಶು ಮಂದಿರಕ್ಕೂ ಹಾನಿಯಾಗಿದೆ ಎಂದು ತಿಳಿಸಿದೆ.
ಪೋಲೆಂಡ್ ರಷ್ಯಾ ವಾಯುಪ್ರದೇಶ ಉಲ್ಲಂಘನೆ ಮಾಡಿದ್ದಾಗಿ ಆರೋಪಿಸಿದೆ. ಹಾಗಾಗಿ ತನ್ನ ಗಗನಸೀಮೆಯನ್ನು ರಕ್ಷಿಸಲು ಜೆಟ್‌ಗಳನ್ನು ಹಾರಿಸಿತು. ಝಪೊರಿಝಿಯಾ, ಚೆರ್ಕಾಸಿ, ಸುಮಿ ಸೇರಿದಂತೆ ಇತರ ನಗರಗಳಲ್ಲಿಯೂ ಸಾವುನೋವು ವರದಿಯಾಗಿದೆ. ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ರಷ್ಯಾ 2022ರ ಫೆಬ್ರವರಿಯಲ್ಲಿ ಪ್ರಾರಂಭಿಸಿದ ಆಕ್ರಮಣವನ್ನು ಮುಂದುವರಿಸುವುದಾಗಿ ಘೋಷಿಸಿದೆ.
ವರದಿ : ಲಾವಣ್ಯ ಅನಿಗೋಳ