ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಕೊರತೆಯನ್ನು ನಿವಾರಿಸಲು, ಒಟ್ಟು 18 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ 12 ಸಾವಿರ ಮತ್ತು ಅನುದಾನಿತ ಶಾಲೆಗಳಿಗೆ 6 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸ್ವಾಗತಕ್ಕೆ ಈ ಶಿಕ್ಷಕರು ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಸಂದರ್ಭದಲ್ಲಿ, ಈಗಾಗಲೇ ನಡೆದಿರುವ ನೇಮಕಾತಿಗಳನ್ನು ಸೇರಿಸಿ, ಒಟ್ಟು 32 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆಯು ವಿಶೇಷ ಗಮನ ಹರಿಸಿದೆ ಎಂದು ಸಚಿವರು ಹೇಳಿದರು. ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು, ಶಿಕ್ಷಕರನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಯುದ್ಧ ಸಮಯದಲ್ಲಿ ಶಸ್ತ್ರಾಭ್ಯಾಸ ಬೇಡದಂತೆ, ಈಗಿನಿಂದಲೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ಮಾಡುವ ಅನುಕೂಲ ಮಾಡಲಾಗುತ್ತಿದೆ ಎಂದು ಉದಾಹರಣೆ ನೀಡಿ ತಿಳಿಸಿದರು.
ಹಿಂದಿನ ಸರ್ಕಾರವು ಕೇವಲ ಐದು ಸಾವಿರದೊಳಗೆ ಶಿಕ್ಷಕರ ನೇಮಕಾತಿ ಮಾಡಿದ್ದರೆ, ಈ ಸರ್ಕಾರವು ಮಕ್ಕಳ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗನೇ ವಿಶಾಲ ಮಟ್ಟದ ನೇಮಕಾತಿ ಮುಗಿಸಲು ಮುಂದಾಗಿದೆ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ VISL ಕಾರ್ಖಾನೆ ಭೇಟಿ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಕಾರ್ಖಾನೆ ಪುನಶ್ಚೇತನ ಮಾಡುತ್ತೇವೆ ಎಂದು ಎಷ್ಟು ವರ್ಷಗಳಿಂದ ಹೇಳುತ್ತಿದ್ದಾರೆ. ಕೇವಲ ಹೇಳಿಕೆಯಿಂದ ಅಲ್ಲ, ಅದು ಕಾರ್ಯರೂಪಕ್ಕೆ ಬರಬೇಕು. ಅವರ ಹೇಳಿಕೆಯನ್ನು ಅವರು ಉಳಿಸಿಕೊಂಡು ಹೋಗಲಿ ಎಂದು ನಾನು ಹಾರೈಸುತ್ತೇನೆ ಎಂದು ಟೀಕಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

