2.5 ವರ್ಷದ ಸನಿಹ : ಸಿದ್ದು ಕುರ್ಚಿಗೆ ಸಂಕಷ್ಟ?

ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಸೇಫಾ? ಅಥವಾ ಬದಲಾವಣೆ ಆಗುತ್ತದೆಯೇ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಜ್ಯೋತಿಷಿಗಳಿಂದ ಹಿಡಿದು ಪ್ರತಿಪಕ್ಷಗಳವರೆಗೆ ಎಲ್ಲರೂ ಈ ಬಗ್ಗೆ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯ ಸ್ವತಃ ನಾನು 5 ವರ್ಷಗಳ ಕಾಲ ಸಿಎಂ ಆಗಿ ಇರುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆದರೂ ಚರ್ಚೆಗೆ ವಿರಾಮ ಬಿದ್ದಿಲ್ಲ. ಹಾಗಾದರೆ ಇದು ಕೇವಲ ವದಂತಿನಾ ಅಥವಾ ನಿಜವಾಗಿಯೂ ಬದಲಾವಣೆ ಸಾಧ್ಯವಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಸರ್ಕಾರ ರಚನೆಯ ಸಂದರ್ಭದಲ್ಲಿಯೇ ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಇತ್ತು. ಆದರೆ ಹೈಕಮಾಂಡ್ ಅಂತಿಮವಾಗಿ ಸಿದ್ದರಾಮಯ್ಯ ಅವರ ಕೈಗೆ ಅಧಿಕಾರ ಹಸ್ತಾಂತರಿಸಿತು. ಅಂದಿನಿಂದಲೂ ಎರಡುವರೆ ವರ್ಷಗಳ ಬಳಿಕ ನಾಯಕತ್ವ ಬದಲಾವಣೆ ಎಂಬ ವದಂತಿ ತಲೆದೋರಿತು. ಹೈಕಮಾಂಡ್ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಈ ಮಾತು ಇಂದಿಗೂ ರಾಜಕೀಯ ವಲಯದಲ್ಲಿ ಜೀವಂತವಾಗಿದೆ.

ಸಿದ್ದರಾಮಯ್ಯ ಬಣವು ಈ ವದಂತಿಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟಿತ್ತು. ಇದರಿಂದ ಸಿದ್ದರಾಮಯ್ಯ-ಡಿಕೆಶಿ ಬಣಗಳ ನಡುವೆ ಹೇಳಿಕೆ-ಪ್ರತಿಹೇಳಿಕೆಗಳು ಗಟ್ಟಿಯಾಗಿ ಕೇಳಿ ಬಂದವು. ಒಂದು ಹಂತದಲ್ಲಿ ಡಿಕೆಶಿಯೇ ಅಸಹಾಯಕತೆಯ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದರು. ಆದರೆ ವಾಸ್ತವವಾಗಿ ಹೈಕಮಾಂಡ್ ಏಕೆ ಬದಲಾವಣೆಗೆ ಮುಂದಾಗುತ್ತಿಲ್ಲ ಎಂಬುದು ಕುತೂಹಲಕರ. ಸಿದ್ದರಾಮಯ್ಯ ಅವರಿಗಿರುವ ಜನಮೆಚ್ಚುಗೆ ಜೊತೆಗೆ ಶಾಸಕರ ಪ್ರಬಲ ಬೆಂಬಲವು ಅವರಿಗೆ ದೊಡ್ಡ ಶಕ್ತಿಯಾಗಿದೆ. ಕಾಂಗ್ರೆಸ್ ಶಾಸಕರ ಪೈಕಿ 80-90 ಶೇಕಡಾ ಮಂದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಹೈಕಮಾಂಡ್ ಅವರಿಗೆ ವಿರುದ್ಧ ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ.

ಡಿಕೆ ಶಿವಕುಮಾರ್ ಅವರನ್ನು ಕಡೆಗಣಿಸುವುದೂ ಸುಲಭವಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿಯೂ, ಉಪಮುಖ್ಯಮಂತ್ರಿಯಾಗಿಯೂ ಪಕ್ಷದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಸಂಘಟನಾ ಸಾಮರ್ಥ್ಯ, ಹೈಕಮಾಂಡ್ ನಂಬಿಕೆ ಇವರಿಗೆ ಪ್ಲಸ್ ಪಾಯಿಂಟ್. ಆದರೆ ಅವರ ಮೇಲೆ ಇರುವ ಭ್ರಷ್ಟಾಚಾರ ಆರೋಪಗಳು, ತತ್ವಶುದ್ಧತೆಯ ಕೊರತೆ ಹಾಗೂ ಶಾಸಕರಲ್ಲಿ ಹೆಚ್ಚು ಬೆಂಬಲ ಇಲ್ಲದಿರುವುದು ಹಿನ್ನಡೆಯಾಗಿದೆ.

ಇದಕ್ಕೊಟ್ಟಿಗೆ ಸಿದ್ದರಾಮಯ್ಯ ಅವರ ಸೈಲೆಂಟ್ ನಡವಳಿಕೆ ರಾಜಕೀಯ ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ ತಮ್ಮ ಆಪ್ತ ಕೆಎನ್ ರಾಜಣ್ಣ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗದಿದ್ದು, ಹೈಕಮಾಂಡ್ ಮುಂದೆ ಸ್ವಲ್ಪ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಅಕ್ಟೋಬರ್ ಕ್ರಾಂತಿ ಅಥವಾ ನವಂಬರ್ ಕ್ರಾಂತಿ ಎಂಬ ಮಾತುಗಳು ಕೇಳಿಬಂದರೂ, ನಿಜವಾದ ಬದಲಾವಣೆಯ ಸೂಚನೆಗಳು ಸ್ಪಷ್ಟವಾಗಿಲ್ಲ.

ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬಿಹಾರ ಚುನಾವಣೆ ಹಾಗೂ ಇತರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕದ ವಿಚಾರ ತಕ್ಷಣ ನಿರ್ಧಾರವಾಗುವ ಸಾಧ್ಯತೆ ಕಡಿಮೆ. ಒಂದು ವೇಳೆ ನಿರ್ಧಾರ ಬಂದರೂ ಅದರ ಪರಿಣಾಮವನ್ನು ಎಣ್ಣೆ ಹಾಕಿದಂತೆ ಲೆಕ್ಕಹಾಕಿ ಮಾತ್ರ ಹೈಕಮಾಂಡ್ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಹೀಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ಕುರ್ಚಿ ಸುರಕ್ಷಿತವೇ? ಡಿಕೆಶಿಗೆ ಅವಕಾಶ ಸಿಗುತ್ತದೆಯೇ? ಎಂಬ ಪ್ರಶ್ನೆಗಳು ಊಹಾಪೋಹಗಳಷ್ಟೇ ಉಳಿದಿವೆ. ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದ್ದು, ಆ ನಿರ್ಧಾರ ಯಾವಾಗ, ಹೇಗೆ ಬರುತ್ತದೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author