ಬೆಂಗಳೂರು: ನಗರದಲ್ಲಿ ಬೈಕ್ ಸ್ಪಂಟ್ ಮಾಡಿ ಕೇಸ್ ಹಾಕಿಸಿಕೊಳ್ಳುವವರ ಪೈಕಿ ಅಪ್ರಾಪ್ತರ ಪಾಲು ಹೆಚ್ಚುತ್ತಲೇ ಇದೆ. ಪ್ರಸಕ್ತ ವರ್ಷ ಜ 1 ರಿಂದ ಮೇ 31 ರ ನಡುವೆ ಬೈಕ್ ಸ್ಟಂಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಪೈಕಿ ಶೇ.20 ರಷ್ಟು ಸವಾರರು ಅಪ್ರಾಪ್ತರಾಗಿದ್ದಾರೆ.
2020 ರಲ್ಲಿ ಶೇ.9 ರಷ್ಟು,2021 ರಲ್ಲಿ ಶೇ. 13 ರಷ್ಟು ಅಪ್ರಾಪ್ತರು ಬೈಕ್ ಸ್ಟಂಟ್ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪೈಕಿ ಕೆಲವರಿಗೆ ಪಾಲಕರೇ ಬೈಕ್ ಕೊಡಿಸಿದ್ದಾರೆ. ಇನ್ನೂ ಕೆಲವರಿಗೆ ಸಂಬಂಧಿಕರಿಂದ ಹಾಗೂ ಸ್ನೇಹಿತರಿಂದ ಬೈಕ್ ಗಳನ್ನು ಪಡೆದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಬನ್ನೇರುಘಟ್ಟ ರಸ್ತೆಯಲ್ಲಿ ತನ್ನ ತಂದೆಯ ಗೇರ್ ಲೆಸ್ ಸ್ಕೂಟರ್ ನಲ್ಲಿ ವೀಲಿಂಗ್ ಮಾಡಿದ್ದ 16 ವರ್ಷದ ಬಾಲಕನ ವಿರುದ್ಧ ಇತ್ತೀಚೆಗೆ ಹುಳಿಮಾವು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ತಂದೆಯನ್ನು ಠಾಣೆಗೆ ಕರೆಸಿಕೊಂಡಿದ್ದರು. ಈ ವೇಳೆ ಬಾಲಕನ ತಂದೆ ತನ್ನ ಮಗ ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದರು. ಆದಾಗ್ಯೂ ಸಾಕ್ಷಿ ಆದರಿಸಿ ಪೊಲೀಸರು ಮೋಟಾರ್ ವಾಹನ ಕಾಯಿದೆ 180 ರ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿದ್ದರು.
ಅಪ್ರಾಪ್ತರು ದ್ವಿಚಕ್ರ ವಾಹನ ಸವಾರಿ ಮಾಡುವ ಪ್ರವೃತ್ತಿ ಹೆಚ್ಚಿದೆ. ಅವರಿಗೆ ಈ ವಯಸ್ಸಿನಲ್ಲೇ ಮೋಜು ಮಾಡುವ ಹುಮ್ಮಸ್ಸು ಹೆಚ್ಚಿರುತ್ತದೆ. ಅನೇಕರು ಅತಿ ವೇಗದ ಚಾಲನೆ, ವೀಲಿಂಗ್, ಟ್ರಿಪಲ್ ರೈಡಿಂಗ್ ಮತ್ತು ಇತರ ಸಾಹಸಗಳನ್ನು ಮಾಡಲು ಬಯಸುತ್ತಾರೆ. ಮಾಧ್ಯಮಗಳಲ್ಲಿ ತೋರಿಸುವ ಇಂತಹ ಸಾಹಸಗಳಿಂದ ಅವರು ಪ್ರಚೋದನೆಗೆ ಒಳಗಾಗುತ್ತಾರೆ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದರು.