Tuesday, July 15, 2025

Latest Posts

ರಿಂಗ್‌ ರೋಡ್‌ ಶುಭಗೆ ದಯೆ? : 2003 ಕೇಸ್‌ಗೆ ಈಗ ಹೈಕೋರ್ಟ್‌ ತೀರ್ಪು

- Advertisement -

ಇಡೀ ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ್ದ 2003ರ ರಿಂಗ್ ರೋಡ್ ಶುಭ ಮರ್ಡರ್ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಕೊಲೆ ಅಪರಾಧಿ ಶುಭ ಶಂಕರನಾರಾಯಣ ಹಾಗೂ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.

ಏನು ನಡೆದಿತ್ತು? ಅಂತಾ ನೋಡ್ತಾ ಹೋದರೆ – ಗಿರೀಶ್ ಹಾಗೂ ಶುಭ ಶಂಖರನಾರಾಯಣ ಅವರ ಮದುವೆ ನಿಗದಿಯಾಗಿತ್ತು. ಇಬ್ಬರ ಕುಟುಂಬವೂ ಹಿಂದಿನಿಂದಲೂ ಪರಿಚಯಸ್ಥರಾಗಿದ್ದರು. ಗಿರೀಶ್ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಭಾ ಎಲ್ಎಲ್‌ಬಿ ಕಾನೂನು ಪದವಿಯ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಳು. ಅವರ ನಿಶ್ಚಿತಾರ್ಥ 2003 ನವೆಂಬರ್ 30ರಂದು ನಡೆದಿತ್ತು. ಆದರೆ ಶುಭಾ ತನ್ನ ಕಾಲೇಜಿನ ಜೂನಿಯರ್ ಆಗಿದ್ದ 19 ವರ್ಷದ ಅರುಣ್ ವರ್ಮಾ ಎಂಬಾತನನ್ನು ಪ್ರೀತಿಸುತ್ತಿದ್ದಳು.

2003ರ ಡಿಸೆಂಬರ್ 3ರ ರಾತ್ರಿ, ಬಿ.ವಿ. ಗಿರೀಶ್ ತಮ್ಮ ಭಾವಿ ಪತ್ನಿ ಶುಭಾ ಅವರನ್ನು ಊಟಕ್ಕೆ ಕರೆದೊಯ್ದಿದ್ದರು. ಊಟದ ನಂತರ, ಶುಭಾ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಟೇಕ್ ಆಫ್ ಆಗುವುದನ್ನು ನೋಡಲು ಬಯಸಿದ್ದಳು. ಗಿರೀಶ್ ಆಕೆಯನ್ನು ಇನ್ನರ್ ರಿಂಗ್ ರೋಡ್‌ನಲ್ಲಿರುವ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದರು. ಇಬ್ಬರೂ ರನ್‌ವೇ ಕಡೆಗೆ ಮುಖ ಮಾಡಿ ನಿಂತಿದ್ದರು. ಗಿರೀಶ್ ವಿಮಾನಗಳನ್ನು ನೋಡುತ್ತಿದ್ದಾಗ, ದುಷ್ಕರ್ಮಿಗಳು ಬೈಕ್‌ನ ಶಾಕ್ ಅಬ್ಸಾರ್ಬರ್‌ನಿಂದ ತಲೆಗೆ ಹೊಡೆದರು. ಗಂಭೀರವಾಗಿ ಗಾಯಗೊಂಡ ಕಾರಣ ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಗಿರೀಶ್ ಮೃತಪಟ್ಟಿದ್ದರು.

ಆಗ ವಿವೇಕನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಕೆ.ಎ. ನಾನಯ್ಯ ಅವರು ಮೊಬೈಲ್ ಕರೆಗಳ ವಿವರಗಳ ಸಹಾಯದಿಂದ ಪ್ರಕರಣವನ್ನು ಭೇದಿಸಿದರು ಮತ್ತು ಅಪರಾಧಿಗಳಾದ ಶುಭಾ, ಅರುಣ್ ಮತ್ತು ಆತನ ಸಹಚರರಾದ ವೆಂಕಟೇಶ್ ಮತ್ತು ದಿನೇಶ್‌ನನ್ನು ಬಂಧಿಸಿದ್ದರು. ಜುಲೈ 2010 ರಲ್ಲಿ, ಸ್ಥಳೀಯ ನ್ಯಾಯಾಲಯವು ನಾಲ್ವರನ್ನೂ ದೋಷಿಗಳು ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತು. ಶುಭಾ ಅರುಣ್‌ನ ಮದುವೆಯಾಗಲು ಬಯಸಿದ್ದರಿಂದ ಇದು ಪೂರ್ವಯೋಜಿತ ಕೊಲೆ ಎಂದು ನ್ಯಾಯಾಲಯ ತೀರ್ಮಾನಿಸಿತು. ಅಪರಾಧಿಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನಂತರ 2012 ರಲ್ಲಿ, ಶುಭಾ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಳು ಮತ್ತು ಜಾಮೀನು ಪಡೆದಿದ್ದಳು. ನಂತರ, ಇತರರೂ ಜಾಮೀನಿನ ಮೇಲೆ ಹೊರಬಂದಿದ್ದರು.

ಇದೀಗ ತನ್ನ ಭಾವಿ ಪತಿ ಗಿರೀಶ್ ಕೊಲೆಯ ಪ್ರಮುಖ ಅಪರಾಧಿ ಶುಭ ಶಂಕರನಾರಾಯಣ, ಆಕೆ ಪ್ರೀತಿಸುತ್ತಿದ್ದ ಹುಡುಗ ಅರುಣ್, ಜೊತೆಗೆ ಕೊಲೆಯಲ್ಲಿ ಭಾಗಿಯಾದ ಮತ್ತಿಬ್ಬರಿಗೆ ಜೀವಾವಧಿ ಶಿಕ್ಷೆಯ ಪ್ರಕರಣ ಸುಪ್ರೀಂಕೋರ್ಟಲ್ಲಿ ಮೇಲ್ಮನವಿಗೆ ಸಲ್ಲಿಕೆಯಾಗಿತ್ತು. ಜುಲೈ 14 ಸೋಮವಾರ ಸುಪ್ರೀಂಕೋರ್ಟ್ ನಾಲ್ವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. ಅಷ್ಟೇ ಅಲ್ಲದೆ, ಶಿಕ್ಷೆಗೊಳಗಾದವರು ಕರ್ನಾಟಕದ ರಾಜ್ಯಪಾಲರ ಮುಂದೆ ದಯಾ ಅರ್ಜಿ ಸಲ್ಲಿಸಲು ಎಂಟು ವಾರಗಳ ಕಾಲಾವಕಾಶವನ್ನು ನೀಡಿದೆ. ಈ ಅವಧಿ ಮುಗಿಯುವವರೆಗೆ ಜಾಮೀನಿನ ಮೇಲೆ ಇರುವವರನ್ನು ಬಂಧಿಸದಂತೆ ಕೋರ್ಟ್ ಆದೇಶಿಸಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss