ಇತ್ತೀಚಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ‘ನಮಸ್ತೆ ಸದಾ ವತ್ಸಲೇ’ ಅನ್ನೋ ಆರ್‌ಎಸ್‌ಎಸ್ ಗೀತೆ ಹಾಡಿ ವಿವಾದಕ್ಕೆ ಒಳಗಾಗಿದ್ದರು. ಇನ್ನೊಂದು ಕಡೆ ನಾಯಕತ್ವ ಬದಲಾವಣೆ ಮತ್ತು ಡಿಕೆಶಿ ಅವರೇ ಸಿಎಂ ಆಗ್ಬೇಕು ಅನ್ನೋ ಒತ್ತಾಯ ಕೇಳುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.
ಇಂಡಿಯಾ ಟುಡೇ ಸೌತ್ ಕಾನ್ಕ್ಲೇವ್‌ನಲ್ಲಿ ಡಿ.ಕೆ ಶಿವಕುಮಾರ್ ಮಾತನಾಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಧರ್ಮಸ್ಥಳ ಪ್ರಕರಣ, ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕದ ರಾಜಕೀಯದಿಂದ ಹಿಡಿದು ರಾಷ್ಟ್ರಮಟ್ಟದ ವಿಷಯಗಳವರೆಗೂ ವಿಸ್ತೃತವಾಗಿ ಮಾತನಾಡಿದ್ದಾರೆ.
ತಮ್ಮ ರಾಜಕೀಯ ಭವಿಷ್ಯವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, ನನ್ನ ಅಹಂ ನನಗೆ ಮುಖ್ಯವಲ್ಲ. ಗಾಂಧಿ ಕುಟುಂಬಕ್ಕೆ ನನ್ನ ನಿಷ್ಠೆ ಬೇರೆ. ಪಕ್ಷ ಮತ್ತು ದೇಶವನ್ನು ಒಗ್ಗಟ್ಟಿನಿಂದ ಕಾಪಾಡಿದ್ದು ಗಾಂಧಿ ಕುಟುಂಬ. ನಾನು ‘ಹುಟ್ಟು ಕಾಂಗ್ರೆಸ್ಸಿಗ’ ಕಾಂಗ್ರೆಸ್ಸಿಗನಾಗಿ ಸಾಯುತ್ತೇನೆ ಎಂಬ ಉದ್ದೇಶವನ್ನು ವ್ಯಕ್ತಪಡಿಸಿದರು.
ಧರ್ಮಸ್ಥಳ ದೇವಾಲಯದ ವಿವಾದದ ಬಗ್ಗೆ ಕೂಡ ಅವರು ಪ್ರತಿಕ್ರಿಯಿಸಿದರು. ಇದನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಆಂತರಿಕ ಜಗಳ ಎಂದು ಡಿಕೆಶಿ ಬಣ್ಣಿಸಿದ್ದಾರೆ. ಜೊತೆಗೆ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ನಾನು ಬಿಜೆಪಿ ಕಾಲ ಎಳೆಯಲು ಪ್ರಯತ್ನಿಸುತ್ತಿದ್ದೇನೆ. ನಾನು ಗಾಂಧಿ ಕುಟುಂಬಕ್ಕೆ ನಿಷ್ಠೆಯಿರುವ ಕಾಂಗ್ರೆಸ್ಸಿಗ. ಗಾಂಧಿ ಕುಟುಂಬವಿಲ್ಲದೆ ಪಕ್ಷದ ಏಕತೆ ಸಾಧ್ಯವಿಲ್ಲ ಎಂದಿದ್ದಾರೆ.
ಅಲ್ಲದೆ ತಮ್ಮ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಗಳ ಬಗ್ಗೆ ಮಾತನಾಡಿ ಈ ನಡುವೆ, ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳು ಎದ್ದಿವೆ. ಮುಖ್ಯಮಂತ್ರಿ ಹುದ್ದೆ ನನ್ನ ಗುರಿಯಲ್ಲ. ನಾನು ಸ್ವಾರ್ಥಿಯಾಗಲು ಬಯಸುವುದಿಲ್ಲ. ನಾನು ಸಿದ್ಧರಾಮಯ್ಯ ಅವರೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇನೆ. ಸಿಎಂ ಆಗುವ ಬಗ್ಗೆ ಕಾಲವೇ ಉತ್ತರಿಸುತ್ತೆ ಎಂದು ಸ್ಪಷ್ಟಪಡಿಸಿದರು.
ಐದು ವರ್ಷದ ಕಾಲದಲ್ಲಿ ದೇಶದಲ್ಲಿ ಬದಲಾವಣೆ ಅನಿವಾರ್ಯ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದು, 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ದೇಶ ಬದಲಾವಣೆಗೆ ಹಂಬಲಿಸುತ್ತಿದೆ. ದೇಶಕ್ಕೆ ಬದಲಾಗಬೇಕಾದ ಶಕ್ತಿ ಬೇಕಾಗಿದೆ. ನನಗೆ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿ ಆಗುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಕಾಂಗ್ರೆಸ್ ನಾಯಕನ ಪರವಾಗಿ ತಮ್ಮ ನಿಷ್ಠೆ ಮೆರೆದಿದ್ದಾರೆ.
ವರದಿ : ಲಾವಣ್ಯ ಅನಿಗೋಳ