ಗೋವಾದ ರೆಸ್ಟೋರೆಂಟ್–ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ದುರ್ಮರಣ ಹೊಂದಿದ್ದಾರೆ. ಮೃತಪಟ್ಟವರಲ್ಲಿ ಪ್ರವಾಸಿಗರು ಹಾಗೂ ಕ್ಲಬ್ ಸಿಬ್ಬಂದಿ ಸೇರಿದ್ದು, ಮೂವರು ಮಹಿಳೆಯರು ಮತ್ತು 20 ಪುರುಷರು ಗೊಂಡಿರುವುದು ದೃಢಪಟ್ಟಿದೆ.
ಉತ್ತರ ಗೋವಾದ ಅರ್ಪೋರಾದಲ್ಲಿರುವ ‘ಬರ್ಛ್ ಬೈ ರೋಮಿಯೋ ಲೇನ್’ ಕ್ಲಬ್ನಲ್ಲಿ ಈ ದುರಂತ ಸಂಭವಿಸಿದೆ. ಘಟನೆ ನಂತರ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟವೇ ಬೆಂಕಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಹೆಚ್ಚಿನ ಮೃತದೇಹಗಳು ಅಡುಗೆಮನೆ ಭಾಗದಲ್ಲಿ ಪತ್ತೆಯಾಗಿರುವುದರಿಂದ ಸಿಬ್ಬಂದಿಯೇ ಹೆಚ್ಚು ಬಲಿಯಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡಾಗ ಹಲವರು ಬೇಸ್ಮೆಂಟ್ ಕಡೆಗೆ ಓಡಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆಗಳು ಗಮನಕ್ಕೆ ಬಂದಿವೆ.
ಬಿಜೆಪಿ ಶಾಸಕ ಮೈಕೆಲ್ ಲೋಬೋ ಈ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, “ಗೋವಾದಲ್ಲಿರುವ ಎಲ್ಲಾ ಕ್ಲಬ್ಗಳ ಸುರಕ್ಷತಾ ಪರಿಶೀಲನೆ ನಡೆಸುವುದು ಈಗ ಅತ್ಯಂತ ಅಗತ್ಯ ಎಂದಿದ್ದಾರೆ. ಪ್ರವಾಸಿಗರು ಗೋವಾವನ್ನು ಸದಾ ಸುರಕ್ಷಿತ ತಾಣವೆಂದು ಪರಿಗಣಿಸುತ್ತಿದ್ದರೂ, ಈ ದುರಂತವು ಸುರಕ್ಷತಾ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆಯನ್ನು ಎಬ್ಬಿಸಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ಟ್ವೀಟ್ನಲ್ಲಿ, “ಅರ್ಪೋರಾದಲ್ಲಿ ನಡೆದ ಈ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಮೃತಪಟ್ಟಿರುವುದು ನೋವಿನ ವಿಷಯ. ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಎಂದು ತಿಳಿಸಿದ್ದಾರೆ.
ಗೋವಾ ಡಿಜಿಪಿ ಅಲೋಕ್ ಕುಮಾರ್ ಅವರು, ಇಲ್ಲಿಯವರೆಗೆ 23 ಸಾವುಗಳು ದೃಢಪಟ್ಟಿವೆ. ಬೆಂಕಿ ನೆಲಮಹಡಿಯ ಅಡುಗೆಮನೆ ಪ್ರದೇಶದಲ್ಲಿ ಆರಂಭಗೊಂಡಿದೆ. ಕಾರಣ ಇನ್ನೂ ಪತ್ತೆಯಾಗಿಲ್ಲ. ಹೆಚ್ಚಿನ ಮೃತದೇಹಗಳು ಅಡುಗೆಮನೆ ಪ್ರದೇಶದಲ್ಲೇ ಸಿಕ್ಕಿವೆ. ಮೆಟ್ಟಿಲುಗಳ ಮೇಲೂ ಎರಡು ಮೃತದೇಹಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಕ್ಲಬ್ವು ಬಾಗಾ ಬೀಚ್ ಬಳಿಯಿರುವ ಜನಪ್ರಿಯ ತಾಣವಾಗಿದ್ದು, ಬೆಂಕಿ ಹೊತ್ತಿಕೊಳ್ಳುವಾಗ ಅನೇಕ ಮಂದಿ ಒಳಗಿದ್ದರೆಂದು ಅಂದಾಜಿಸಲಾಗಿದೆ. ಉತ್ತರ ಗೋವಾದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಡಿಜಿಪಿ ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ಜೋರಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




