ಜೀವನದಲ್ಲಿ ಒಂದು ಕೋಟಿ ಹಣ ಮಾಡಿದ್ರೆ ಸಾಕು ಅಂತಾ ಕೋಟ್ಯಂತರ ಜನರು ನಾನಾ ರೀತಿಯಲ್ಲಿ ಕಷ್ಟಪಡ್ತಾರೆ. ಅಂತಹದ್ರಲ್ಲಿ 257 ಕೋಟಿ ಹಣ ಬ್ಯಾಂಕ್ ಅಕೌಂಟ್ಗೆ ಬಂದ್ರೆ, ಹೇಗಿರುತ್ತೆ ಹೇಳಿ.. ಹೌದು ವೀಕ್ಷಕರೇ.. ಇದು ಅಚ್ಚರಿ ಆದ್ರೂ ಸತ್ಯ.. ಬಡ ಹೈನುಗಾರನ ಬ್ಯಾಂಕ್ ಖಾತೆಗೆ ಬರೋಬ್ಬರಿ 257ಕೋಟಿ ರೂಪಾಯಿ ಹಣ ಬಂದಿದ್ದು, ಇಡೀ ಊರಿನ ಜನರೇ ಒಂದು ಕ್ಷಣ ದಂಗಾಗಿದ್ದಾರೆ. ಕುತೂಹಲದ ವಿಷ್ಯ ಅಂದ್ರೆ, ಹಣ ಕಳುಹಿಸುತ್ತಿರುವ ವ್ಯಕ್ತಿ ಯಾರು ಎಂಬುದೇ ಗೊತ್ತಿಲ್ಲ.
ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ರತನ್ಪುರಿ ಪ್ರದೇಶದ ಗ್ರಾಮವೊಂದರಲ್ಲಿ ಇಂತಹದೊಂದು ಅಚ್ಚರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವಕನ ಬ್ಯಾಂಕ್ ಖಾತೆಯ ಕುರಿತು ತನಿಖೆ ಆರಂಭಿಸಿದ್ದಾರೆ. ರತನ್ಪುರಿ ನಿವಾಸಿ ಅಶ್ವಿನಿ ಕುಮಾರ್ ಎಂಬಾತನ ಖಾತೆಗೆ 257 ಕೋಟಿ ಹಣ ಬಂದಿದೆ. ಅಶ್ವಿನಿ ಕುಮಾರ್ನಿಂದ ಕೆಲಸ ಕೊಡಿಸುವುದಾಗಿ ವಂಚಕರು ದಾಖಲೆಗಳನ್ನು ಪಡೆದು, ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಯುವಕ ನೀಡಿರುವ ದಾಖಲೆಗಳ ಆಧಾರದ ಮೇಲೆ ನಕಲಿ ಖಾತೆ ಮತ್ತು ನಕಲಿ ಕಂಪನಿಯನ್ನು ತೆರೆಯಲಾಗಿದೆ. ಇದರಿಂದ ಜಿಎಸ್ಟಿಯ ಇ-ವೇ ಬಿಲ್ಲಿಂಗ್ನಲ್ಲಿ ವಂಚನೆ ಮಾಡಿರೋದು ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಚಿನಿ ಕುಮಾರ್ನಿಂದ ಪೊಲೀಸರು ಯಾವುದೇ ಹೇಳಿಕೆಯನ್ನು ದಾಖಲಿಸಿಕೊಂಡಿಲ್ಲ. ಯಾರೋ ರಾಜಕೀಯ ನಾಯಕನಿಗೆ ಸಂಬಂಧಿಸಿದ ನಕಲಿ ಕಂಪನಿಯಿಂದ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಈ ಕುರಿತು ತನಿಖೆ ನಡೆದ ನಂತರವೇ ಅಸಲಿ ಸತ್ಯ ಬಹಿರಂಗವಾಗಬೇಕಿದೆ.