ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭವಾಗಿ ಮೂರು ದಿನಗಳಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ದರ್ಶನ ಸ್ಥಗಿತಗೊಳಿಸಲಾಗಿದ್ದು, ಭಾನುವಾರ ಬೆಳಿಗ್ಗೆ 5 ಗಂಟೆಗೆ ಪುನಃ ಆರಂಭವಾಯಿತು.
ಮಧ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್ ರಸ್ತೆ ಉದ್ದಕ್ಕೂ ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತಿದ್ದು, ಬೆಳಿಗ್ಗೆ 8ಕ್ಕೆ ಸಾಲು ಸರಾಗವಾಗಿ ಮುಂದುವರಿಯಿತು. ಮಧ್ಯಾಹ್ನ ವೇಳೆಗೆ ಭಕ್ತರ ಸಂಖ್ಯೆ ಗಣನೀಯವಾಗಿ ಏರಿದರೂ ಕೆಲ ಗಂಟೆಗಳಲ್ಲಿ ಎಲ್ಲರೂ ದರ್ಶನ ಪಡೆದರು.
1,000 ಮತ್ತು ₹300 ದರದ ಟಿಕೆಟ್ ಖರೀದಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ಭಾನುವಾರ ಬೆಳಿಗ್ಗೆ 8ರ ವೇಳೆಗೆ ಪಾಸ್ ಹಾಗೂ ಲಡ್ಡು ಮಾರಾಟದಿಂದ ದಾಖಲೆ ಪ್ರಮಾಣದ ₹2.24 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.
ಧರ್ಮದರ್ಶನ ಸೇರಿದಂತೆ ಎಲ್ಲಾ ಸಾಲುಗಳಲ್ಲಿ ಭಕ್ತರು ಅಡ್ಡಿಯಿಲ್ಲದೆ ಸರಾಗವಾಗಿ ದರ್ಶನ ಪಡೆದರು. ಈ ವೇಳೆ ಕೆಲ ವೃದ್ಧರು ಮತ್ತು ಮಕ್ಕಳು ಕುಟುಂಬದಿಂದ ಬೇರ್ಪಟ್ಟ ಘಟನೆಗಳೂ ನಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಅವರನ್ನು ಕುಟುಂಬದವರೊಂದಿಗೆ ಸೇರಿಸಿತು.
ಶನಿವಾರ ರಾತ್ರಿ 9 ಗಂಟೆಯ ವೇಳೆಗೆ 1.2 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದರು. ಜಾತ್ರಾ ಮಹೋತ್ಸವದ ಎಲ್ಲಾ ವ್ಯವಸ್ಥೆಗಳು ಯೋಜನೆಯಂತೆ ಸುಗಮವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಶ್ಲಾಘಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ