ಜಗತ್ತಿನಲ್ಲೇ ಅತಿ ಉದ್ದದ 300 ಕಿಮೀ ಟ್ರಾಫಿಕ್ ಜಾಮ್! ಇದ್ಯಾವುದಪ್ಪಾ ಇಷ್ಟೊಂದು ಉದ್ದದ ಟ್ರಾಫಿಕ್ ಜಾಮ್ ಎಂಬ ಪ್ರಶ್ನೆ ಕಾಡುತ್ತಲ್ಲವೇ? ಹೌದು, ಇದು ಆಗಿದ್ದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ. ದೇಶವಷ್ಟೇ ಅಲ್ಲ, ಜಗತ್ತೇ ಕುಂಭಮೇಳದ ಜಪ ಮಾಡುತ್ತಿದೆ. ಸದ್ಯ ಎಲ್ಲೆಡೆಯಿಂದ ಪ್ರಯಾಗ್ ರಾಜ್ ನತ್ತ ಜನ ಧಾವಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗದೆ ಇನ್ನೇನಾಗುತ್ತೆ? ಸುಮಾರು 12 ಗಂಟೆಗಳ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ಭಕ್ತರು ಪರದಾಡುವಂತಹ ಸ್ಥಿತಿ ಎದುರಾಗಿದೆ.
ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಮಹಾ ಕುಂಭಮೇಳವು ಈಗ ಅಂತಿಮ ಹಂತದಲ್ಲಿದೆ. ನಿತ್ಯವೂ ಲಕ್ಷಾಂತರ ಭಕ್ತರು ತಮ್ಮ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ನಗರದ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡು ಸ್ಥಗಿತಗೊಂಡಿದೆ. ಮಹಾ ಕುಂಭ ನಗರದಿಂದ ನಗರದ ಪ್ರಮುಖ ಪ್ರದೇಶಗಳಿಗೆ ವಾಹನಗಳ ಉದ್ದನೆಯ ಸಾಲು ರೂಪುಗೊಂಡಿದೆ. ಭಕ್ತರು 20 ಕಿಲೋಮೀಟರ್‌ಗಳವರೆಗೆ ನಡೆದುಕೊಂಡು ಹೋಗಬೇಕಾದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಧೂಮನ್‌ಗಂಜ್, ಚೌಫಟ್ಕಾ, ರೈಲ್ವೆ ಸ್ಟೇಷನ್ ಸಿಟಿ ಸೈಡ್, ದರಾಗಂಜ್ ಮತ್ತು ಬಕ್ಷಿ ಅಣೆಕಟ್ಟು ಮುಂತಾದ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯ ಸ್ಥಿತಿ ಹೇಳತೀರದು. ಇದರಿಂದಾಗಿ ಭಕ್ತರು ಹೈರಾಣಾಗಿದ್ದು ಸುಳ್ಳಲ್ಲ.
ಇಷ್ಟೆಲ್ಲಾ ಇದ್ದರೂ, ಸಂಗಮದ ನಡೆಯುತ್ತಿರುವ ಕುಂಭ ಸ್ಥಾನದಲ್ಲಿ ಭಕ್ತರ ಉತ್ಸಾಹ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರತಾಪಗಢದ ಮೂಲಕ ಲಕ್ಷಾಂತರ ಭಕ್ತರು ಪ್ರಯಾಗರಾಜ್ ಪ್ರವೇಶಿಸುತ್ತಿದ್ದಾರೆ. ಅವರ ಪ್ರಯಾಣ ಮಾರ್ಗಗಳಲ್ಲಿಯೂ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಆದಾಗ್ಯೂ, ಭಾದೋಹಿ ಹೆದ್ದಾರಿಯಲ್ಲಿ ಸ್ವಲ್ಪ ತಿಳಿಯಾಗಿದೆ. ಆದರೆ, ವಾರಣಾಸಿ-ಪ್ರಯಾಗರಾಜ್ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದ್ದರೂ, ನಂತರ ಇಲ್ಲಿ ವಾಹನಗಳ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
ಮಧ್ಯ ಪ್ರದೇಶದ ಜಬಲ್ಪುರದಿಂದ ಪ್ರಯಾಗ್‌ರಾಜ್‌ಗೆ 350 ಕಿ.ಮೀ ಮಾರ್ಗದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಲಕ್ಷಾಂತರ ವಾಹನಗಳು ಸಿಲುಕಿಕೊಂಡಿದೆ. ಭಕ್ತರು ನಿಧಾನವಾಗಿಯಾದರೂ ಮಹಾ ಕುಂಭ ತಲುಪಲು ಪ್ರಯತ್ನಿಸುತ್ತಿದ್ದಾರೆ. ಮೊದಲು ಜಬಲ್ಪುರದಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣ 5 ರಿಂದ 6 ಗಂಟೆಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ ಈಗ ಈ ಸಮಯ 24 ಗಂಟೆಗಳಿಗೂ ಹೆಚ್ಚಾಗಿದೆ. ರೇವಾ ಸುತ್ತಮುತ್ತ ಅತ್ಯಂತ ಕೆಟ್ಟ ಜನದಟ್ಟಣೆ ಉಂಟಾಗಿದ್ದು, ಅಲ್ಲಿ ವಾಹನಗಳ ಉದ್ದನೆಯ ಸಾಲುಗಳು ಮತ್ತು ಭಾರೀ ಸಂಚಾರ ದಟ್ಟಣೆ ಇತ್ತು.
ಆಡಳಿತವು ಮಾರ್ಗವನ್ನು ತೆರವುಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ದಟ್ಟಣೆಯ ತೀವ್ರತೆಯಿಂದಾಗಿ, ಭಕ್ತರು ಹಲವಾರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿದೆ. ಮಹಾ ಕುಂಭಮೇಳದ ಈ ಅಂತಿಮ ಹಂತದಲ್ಲಿ ಭಕ್ತರ ಉತ್ಸಾಹ ಕಡಿಮೆಯಾಗುತ್ತಿಲ್ಲ. ಆದರೆ ಸಂಚಾರ ಸಮಸ್ಯೆಯಿಂದಾಗಿ ಅವರ ಪ್ರಯಾಣದ ಮೇಲೂ ಪರಿಣಾಮ ಬೀರುತ್ತಿದೆ.
ಮಹಾ ಕುಂಭಮೇಳದಿಂದಾಗಿ, ಕಾಶಿಯಲ್ಲಿಯೂ ಜನಸಂದಣಿ ಹೆಚ್ಚಾಗುತ್ತಿದೆ. ಕಾಶಿಗೆ ಹೋಗುವ ಪ್ರತಿಯೊಂದು ರಸ್ತೆಯಲ್ಲೂ ವಾಹನಗಳ ಉದ್ದನೆಯ ಸಾಲುಗಳಿವೆ. ಒಂದು ನಿಮಿಷದಲ್ಲಿ 40 ದೋಣಿಗಳು ಸಹ ಘಾಟ್‌ನಿಂದ ಹೊರಡುತ್ತಿವೆ. ಫೆಬ್ರವರಿ 3 ರಿಂದ 9 ರವರೆಗೆ 35 ಲಕ್ಷಕ್ಕೂ ಹೆಚ್ಚು ಭಕ್ತರು ಕಾಶಿಯನ್ನು ತಲುಪಿದ್ದಾರೆ. ಅಯೋಧ್ಯೆಯಲ್ಲಿಯೂ ಸಹ, ಮಹಾಕುಂಭದ ನಂತರ, ರಾಮಲಲ್ಲಾ ದರ್ಶನ ಪಡೆಯಲು ಭಕ್ತರ ಅಪಾರ ಗುಂಪು ಸೇರಿದೆ.
ಇದನ್ನೂ ಓದಿ..https://karnatakatv.net/president-draupadi-murmu-takes-holy-dip-at-triveni-sangam-in-prayagraj/