ಬೆಂಗಳೂರು ನಗರದಲ್ಲಿರುವ ದೇಶದ ಅತಿ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಒಂದಾದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಸುಮಾರು 3,000 ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಗಂಭೀರ ಸಂಕಷ್ಟಕ್ಕೆ ಸಿಲುಕಿವೆ. ಈ ಪರಿಸ್ಥಿತಿ ಮುಂದುವರಿದರೆ ಕಾರ್ಯಾಚರಣೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಫ್ಯಾಬ್ರಿಕೇಷನ್, ವೇಲ್ಡಿಂಗ್, ಹೀಟ್ ಟ್ರೀಟ್ಮೆಂಟ್, ಆಹಾರ ಸಂಸ್ಕರಣೆ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಪ್ರಮುಖ ಇಂಧನವಾಗಿದ್ದು, ಕಳೆದ 10 ದಿನಗಳಿಂದ ಪೂರೈಕೆ ಅಸಮರ್ಪಕವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಉತ್ಪಾದನಾ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 13,500 ಕೈಗಾರಿಕೆಗಳಿದ್ದು, ಅವುಗಳಲ್ಲಿ ಸುಮಾರು 3,000 ಕೈಗಾರಿಕೆಗಳು ಗ್ಯಾಸ್ ಅವಲಂಬಿತವಾಗಿವೆ. ಗ್ಯಾಸ್ ಕೊರತೆಯ ಬಗ್ಗೆ ಪೂರೈಕೆ ಸಂಸ್ಥೆಗಳನ್ನು ಸಂಪರ್ಕಿಸಿದಾಗ, “ಲಭ್ಯತೆ ಆಧಾರದ ಮೇಲೆ ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಸರಬರಾಜು ಸುಧಾರಿಸಿದರೆ ಪರಿಸ್ಥಿತಿ ಸಹಜವಾಗುತ್ತದೆ” ಎಂಬ ಉತ್ತರ ನೀಡಲಾಗುತ್ತಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಆರ್. ಶಿವಕುಮಾರ್ ತಿಳಿಸಿದ್ದಾರೆ.
ಪರಿಸ್ಥಿತಿ ಶೀಘ್ರ ಸುಧಾರಿಸದಿದ್ದರೆ ಕೈಗಾರಿಕೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕಾಗುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ಕಾರ್ಮಿಕರಿಗೆ ಸಂಬಳ ನೀಡುವಲ್ಲಿ ಸಮಸ್ಯೆಗಳು ಎದುರಾಗಲಿವೆ. ಜೊತೆಗೆ ಈಗಾಗಲೇ ಪಡೆದಿರುವ ಆರ್ಡರ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಸಾಧ್ಯವಾಗದಿದ್ದರೆ ದಂಡ ವಿಧಿಸುವ ಆತಂಕವೂ ಉದ್ಯಮಿಗಳಿಗೆ ಕಾಡುತ್ತಿದೆ.
ಇದೇ ವೇಳೆ, ಸಮಸ್ಯೆ ಗಂಭೀರವಾಗಿದ್ದರೂ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಇದುವರೆಗೆ ಯಾವುದೇ ಸಭೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸದಿರುವುದಕ್ಕೆ ಕೈಗಾರಿಕಾ ವಲಯ ಅಸಮಾಧಾನ ವ್ಯಕ್ತಪಡಿಸಿದೆ.
ಅನೇಕ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಇಂಧನ ವೆಚ್ಚವು ಒಟ್ಟು ಉತ್ಪಾದನಾ ವೆಚ್ಚದ ಶೇ.15ರಿಂದ 30ರವರೆಗೆ ಇರುವುದರಿಂದ, ಎಲ್‌ಪಿಜಿ ಬೆಲೆಯ ಏರಿಕೆ ಅಥವಾ ಪೂರೈಕೆಯ ವ್ಯತ್ಯಯ ನೇರವಾಗಿ ಉತ್ಪಾದನೆ ಮತ್ತು ವ್ಯವಹಾರದ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ




