ಬೆಂಗಳೂರು ನಗರದ 5 ಪಾಲಿಕೆಗಳಲ್ಲಿ ವಾರ್ಡ್‌ಗಳನ್ನು ಪುನರ್‌ವಿಂಗಡಿಸಲು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 368 ವಾರ್ಡ್‌ಗಳು ರಚನೆಗೊಂಡಿದೆ. ಹಿಂದಿನ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 111 ವಾರ್ಡ್ ರಚನೆ ಮಾಡಲಾಗಿದೆ. ಇದು ಅತಿ ಹೆಚ್ಚು ವಾರ್ಡ್ ಹೊಂದಿರುವ ದೊಡ್ಡ ಪಾಲಿಕೆಯಾಗಲಿದೆ. ಇನ್ನೂ ಬೆಂಗಳೂರು ಪೂರ್ವ ಪಾಲಿಕೆಯು 50 ವಾರ್ಡ್ ಹೊಂದಿದ್ದು ಕಡಿಮೆ ವಾರ್ಡ್ ಹೊಂದಿರುವ ಪಾಲಿಕೆಯಾಗಲಿದೆ.
ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ 368 ವಾರ್ಡ್ ಗಳ ರಚನೆ ಮಾಡಿ ಆದೇಶ ಹೊರಡಿಸಿದೆ. GBA ನೂತನ ವಾರ್ಡ್ ಗಳನ್ನ ನೋಡೋದಾದ್ರೇ ಬೆಂಗಳೂರು ಕೇಂದ್ರ ಪಾಲಿಕೆ – 63 ವಾರ್ಡ್, ಬೆಂಗಳೂರು ಪೂರ್ವ ಪಾಲಿಕೆ – 50 ವಾರ್ಡ್, ಬೆಂಗಳೂರು ಪಶ್ಚಿಮ ಪಾಲಿಕೆ – 111 ವಾರ್ಡ್, ಬೆಂಗಳೂರು ಉತ್ತರ ಪಾಲಿಕೆ – 72 ವಾರ್ಡ್, ಬೆಂಗಳೂರು ದಕ್ಷಿಣ ಪಾಲಿಕೆ – 72 ವಾರ್ಡ್ ಹೀಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಒಟ್ಟು 368 ವಾರ್ಡ್ ಗಳಾಗಿ ವಿಂಗಡಣೆ ಮಾಡಿದೆ.
ಸರ್ಕಾರವು 5 ನಗರ ಪಾಲಿಕೆಗಳ ಕರಡು ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿ ಮಾಡಿದೆ. ಈ ಹೊಸ ವಾರ್ಡ್‌ಗಳ ಪುನರ್‌ವಿಂಗಡಣೆ ಕುರಿತಂತೆ ಸಂಬಂಧಿತ ವ್ಯಕ್ತಿಗಳು ಸಂಜೆ 5:00 ಗಂಟೆಯೊಳಗೆ, 15 ಅಕ್ಟೋಬರ್ 2025 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ನಂತರ ವಾರ್ಡ್ ವಿಂಗಡಣೆ ಅಂತಿಮಗೊಳ್ಳಲಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಈ ಪುನರ್‌ವಿಂಗಡಣೆ ಬೆಂಗಳೂರಿನ ನಗರ ಆಡಳಿತದಲ್ಲಿ ಹಳೇ ವಾರ್ಡ್‌ಗಳನ್ನು ಸಮರ್ಪಕವಾಗಿ ಪುನರ್ ರಚಿಸುವ ಹಾಗೂ ಚುನಾವಣೆ ಪ್ರಕ್ರಿಯೆಗೆ ಸುಗಮತೆ ಒದಗಿಸುವುದರಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.
ವರದಿ : ಲಾವಣ್ಯ ಅನಿಗೋಳ