ನವರಾತ್ರಿ ಅಂದರೆ ಭಕ್ತಿ, ಸಂಸ್ಕೃತಿ, ಅಲಂಕಾರ, ಸಡಗರ – ಈ ಎಲ್ಲದರ ಸಂಭ್ರಮವೇ ವಿಶೇಷ. ಭಾರತದೆಲ್ಲೆಡೆ ನವರಾತ್ರಿ ಹಬ್ಬದ ಶೋಭೆ ಈಗಾಗಲೇ ಕಂಗೊಳಿಸುತ್ತಿದೆ. ಆದರೆ ಈ ಬಾರಿ ಆಂಧ್ರಪ್ರದೇಶದ ಕೋಣಸೀಮಾ ಜಿಲ್ಲೆಯಲ್ಲಿ ನಡೆದ ಅಲಂಕಾರ ಎಲ್ಲರನ್ನೂ ಬೆರಗುಗೊಳಿಸಿದೆ. ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ನೋಟುಗಳಿಂದ ದೇವಿಯ ಅಲಂಕಾರ ಮಾಡಲಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೋಣಸೀಮಾ ಜಿಲ್ಲೆಯಲ್ಲಿರುವ ಪ್ರಸಿದ್ಧ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಈ ಅಲಂಕಾರ ನಡೆಯುತ್ತಿದೆ. ಪ್ರತಿವರ್ಷ ವಿಭಿನ್ನ ರೀತಿಯ ಅಲಂಕಾರಗಳಿಂದ ಪ್ರಸಿದ್ಧಿಯಾಗಿರುವ ಈ ದೇವಸ್ಥಾನ, ಈ ಬಾರಿ ನಗದು ನೋಟುಗಳೊಂದಿಗೆ ದೇವಿಯನ್ನು ಅಲಂಕರಿಸಿ ಸುದ್ದಿಯಲ್ಲಿದೆ.
5, 10, 20, 50, 100, 200, 500 ರೂಪಾಯಿ ನೋಟುಗಳ ಕಟ್ಟುಗಳನ್ನು ವಿಶೇಷ ರೀತಿಯಲ್ಲಿ ಅಲಂಕಾರಕ್ಕೆ ಬಳಸಲಾಗಿದೆ. ಈ ನೋಟುಗಳನ್ನು ದೇವಿಯ ಸಿಂಹಾಸನದ ಸುತ್ತಲೂ, ಆವರಣದಲ್ಲಿ ಹಾಗೂ ಅಲಂಕಾರಿಕ ಮಾದರಿಗಳ ರೂಪದಲ್ಲಿ ಅಚ್ಚಳಿಯುವಂತೆಯೇ ಅಲಂಕರಿಸಲಾಗಿದೆ. ಒಟ್ಟಾರೆ ನೋಟುಗಳ ಮೌಲ್ಯ 4 ಕೋಟಿ ರೂಪಾಯಿ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಬೆಳಕು–ಬಣ್ಣದ ಅಲಂಕಾರದೊಂದಿಗೆ ನೋಟುಗಳ ಹೊಳಪು ಸೇರಿ ದೇವಿಯ ಆಭರಣದಂತೆ ಕಂಗೊಳಿಸುತ್ತಿದೆ.
ವರದಿ : ಲಾವಣ್ಯ ಅನಿಗೋಳ