ಕೇಂದ್ರ ಸರ್ಕಾರದಿಂದ ಶತ್ರು ಆಸ್ತಿಯ ಉಪ ಕಸ್ಟೋಡಿಯನ್ ಆಗಿ ನೇಮಕಗೊಂಡಿರುವ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ನಗರದಲ್ಲಿನ ನಾಲ್ಕು ಶತ್ರು ಆಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಆಸ್ತಿಗಳು ರಾಜಭವನ ರಸ್ತೆ, ವಿಕ್ಟೋರಿಯಾ ರಸ್ತೆ, ಕಲಾಸಿಪಾಳ್ಯ ಹಾಗೂ ಗ್ರಾಂಟ್ ರಸ್ತೆಯಲ್ಲಿ ಗುರುತಿಸಲ್ಪಟ್ಟಿವೆ.
ವಿಕ್ಟೋರಿಯಾ ರಸ್ತೆಯ ಸಂಖ್ಯೆ 2 ಮತ್ತು 8ರಲ್ಲಿ 8,845 ಚದರ ಅಡಿ ಆಸ್ತಿ, ಕಲಾಸಿಪಾಳ್ಯ 2ನೇ ಮುಖ್ಯರಸ್ತೆಯ ಸೈಟ್ ಸಂಖ್ಯೆ 41ರ 70×30 ಅಳತೆಯ ಆಸ್ತಿ ಹಾಗೂ ಗ್ರಾಂಟ್ ರಸ್ತೆಯ ಸಂಖ್ಯೆ 4ರ ಹೋಟೆಲ್ಗಳನ್ನು 1968ರ ಶತ್ರು ಆಸ್ತಿ ಕಾಯ್ದೆಯಡಿ ಕೇಂದ್ರ ಸರ್ಕಾರ ವಶಪಡಿಸಿಕೊಳ್ಳಲಿದೆ. ರಾಜಭವನ ರಸ್ತೆಯ ಆಸ್ತಿಯ ಮಾರುಕಟ್ಟೆ ಮೌಲ್ಯವೇ 200 ಕೋಟಿ ರೂ. ಮೀರಿದೆ ಎಂದು ಅಂದಾಜಿಸಲಾಗಿದೆ. ಆಸ್ತಿಯ ಅಳತೆ, ಬಾಡಿಗೆದಾರರ ವಿವರಗಳು ಹಾಗೂ ಅತಿಕ್ರಮಣಗಳ ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಗುವುದು ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜಿ. ಜಗದೀಶ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಶತ್ರು ಆಸ್ತಿಗಳ ನಿಖರ ಮೌಲ್ಯಮಾಪನ ನಡೆಯುತ್ತಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಳಿಕ ಭಾರತದ ಶತ್ರು ಆಸ್ತಿ ಕಸ್ಟೋಡಿಯನ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಶತ್ರು ಆಸ್ತಿಯ ಅರ್ಥದಂತೆ, ಪಾಕಿಸ್ತಾನ ಅಥವಾ ಚೀನಾದ ನಾಗರಿಕರ ಸ್ವಾಮ್ಯತ್ವದ ಆಸ್ತಿಗಳನ್ನು ಭಾರತ ಸರ್ಕಾರ ಶತ್ರು ಆಸ್ತಿಗಳೆಂದು ಪರಿಗಣಿಸಿದೆ. 1947ರ ವಿಭಜನೆಯ ನಂತರ ಭಾರತ ತೊರೆದು ಪಾಕಿಸ್ತಾನಕ್ಕೆ ಹೋದ ಅನೇಕರು ತಮ್ಮ ಮನೆ, ಜಮೀನುಗಳನ್ನು ಬಿಟ್ಟು ಹೋದರು. ಇಂತಹ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಂಡು ಶತ್ರು ಆಸ್ತಿ ಎಂದು ಗುರುತಿಸಿದೆ. ಕೇಂದ್ರ ಸರ್ಕಾರ ಈಗ ಈ ಆಸ್ತಿಗಳನ್ನು ಹರಾಜು ಹಾಕುವ ಮತ್ತು ಸರ್ಕಾರದ ಸ್ವಾಮ್ಯಕ್ಕೆ ತರಲು ಕ್ರಮ ಕೈಗೊಂಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

