ಜಾರ್ಖಂಡ್ : ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಯಾಗಿದೆ. ಅದಾದ ನಂತರ ಕನಿಷ್ಠ ಐದು ಮಕ್ಕಳು ಎಚ್‌ಐವಿ (HIV) ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸೋಂಕಿತರಲ್ಲಿ ಏಳು ವರ್ಷದ ಥಲಸ್ಸೆಮಿಯಾ ಪೀಡಿತ ಬಾಲಕನೂ ಇದ್ದಾನೆ.
ಈ ಘಟನೆ ರಾಜ್ಯದ ಆರೋಗ್ಯ ಇಲಾಖೆಯಾದ್ಯಂತ ಆತಂಕ ಮತ್ತು ಆಕ್ರೋಶವನ್ನು ಉಂಟುಮಾಡಿದ್ದು, ರಾಜ್ಯ ಸರ್ಕಾರವು ತಕ್ಷಣದ ತನಿಖೆಗೆ ಆದೇಶಿಸಿದೆ. ಶುಕ್ರವಾರ ಥಲಸ್ಸೆಮಿಯಾ ಪೀಡಿತ ಬಾಲಕನ ಕುಟುಂಬವು ಚೈಬಾಸಾ ಸದರ್ ಆಸ್ಪತ್ರೆಯ ರಕ್ತ ಬ್ಯಾಂಕ್‌ನಿಂದ ನೀಡಲಾದ ರಕ್ತದಲ್ಲೇ ಎಚ್‌ಐವಿ ಸೋಂಕು ಇರುವುದು ಆರೋಪಿಸಿ ದೂರು ನೀಡಿತ್ತು.
ದೂರು ಸ್ವೀಕರಿಸಿದ ಬಳಿಕ, ಜಾರ್ಖಂಡ್ ಸರ್ಕಾರವು ಆರೋಗ್ಯ ಸೇವೆಗಳ ನಿರ್ದೇಶಕ ಡಾ. ದಿನೇಶ್ ಕುಮಾರ್ ನೇತೃತ್ವದ ಐದು ಸದಸ್ಯರ ವೈದ್ಯಕೀಯ ತಂಡವನ್ನು ತಕ್ಷಣ ಸ್ಥಳಕ್ಕೆ ಕಳುಹಿಸಿತು. ಶನಿವಾರ ನಡೆದ ಪ್ರಾಥಮಿಕ ತಪಾಸಣೆಯಲ್ಲಿ ಥಲಸ್ಸೆಮಿಯಾ ರೋಗಿಯ ಜೊತೆಗೆ ಇನ್ನೂ ನಾಲ್ಕು ಮಕ್ಕಳಿಗೂ ಎಚ್‌ಐವಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲ ಮಕ್ಕಳು ಒಂದೇ ಆಸ್ಪತ್ರೆಯ ರಕ್ತ ಬ್ಯಾಂಕ್‌ನಿಂದ ರಕ್ತ ಪಡೆದಿರುವುದಾಗಿ ವರದಿಯಾಗಿದೆ.
ಡಾ. ದಿನೇಶ್ ಕುಮಾರ್ ಅವರು ಪ್ರಾಥಮಿಕ ತನಿಖೆಯಲ್ಲಿ ರಕ್ತ ಬ್ಯಾಂಕಿನ ಕಾರ್ಯವಿಧಾನಗಳಲ್ಲಿ ಗಂಭೀರ ಅಕ್ರಮಗಳು ಪತ್ತೆಯಾದುದಾಗಿ ತಿಳಿಸಿದ್ದಾರೆ. ರಕ್ತದ ಮಾದರಿ ಪರೀಕ್ಷೆ, ದಾಖಲೆ ನಿರ್ವಹಣೆ ಹಾಗೂ ಸುರಕ್ಷತಾ ಪ್ರೋಟೋಕಾಲ್‌ಗಳ ಪಾಲನೆಯಲ್ಲಿ ಗಂಭೀರ ದೋಷಗಳು ಗಮನಕ್ಕೆ ಬಂದಿವೆ. ಈ ಕುರಿತು ವರದಿ ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದ್ದು, ತಕ್ಷಣದ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೀಡಿತ ಮಕ್ಕಳ ಕುಟುಂಬಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ವರದಿ : ಲಾವಣ್ಯ ಅನಿಗೋಳ

