ಮನೆ ಕೆಲಸಕ್ಕೆ ನೇಮಿಸಿದರೆ ಶೇ.5 ಶುಲ್ಕ! ಬರಲಿದೆ ಹೊಸ ಕಾನೂನು

ಮನೆ ಕೆಲಸಗಾರರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹೊಸ ಹೆಜ್ಜೆ ಇಡಲು ಮುಂದಾಗಿದೆ. ಮನೆಗಳಲ್ಲಿ ಕೆಲಸ ಮಾಡುವವರ ಹಿತದೃಷ್ಟಿಯಿಂದ ಗೃಹ ಕಾರ್ಮಿಕರ ಮಸೂದೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಮಸೂದೆಯ ಪ್ರಕಾರ, ಉದ್ಯೋಗದಾತರು ಕಾರ್ಮಿಕರ ವೇತನದ ಶೇ. 5ರಷ್ಟು ಕಲ್ಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ಸರ್ಕಾರ ಗಿಗ್ ವರ್ಕರ್ಸ್ ಮಸೂದೆಗೆ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ಪಡೆದ ನಂತರ, ಇದೀಗ ಗೃಹ ಕಾರ್ಮಿಕರ ಹಕ್ಕು ರಕ್ಷಣೆಯತ್ತ ಗಮನ ಹರಿಸಿದೆ.

ಈ ಮಸೂದೆಯ ಪ್ರಮುಖ ಉದ್ದೇಶವೆಂದರೆ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆಯಂತಹ ಮೂಲಭೂತ ಭದ್ರತೆಗಳನ್ನು ಒದಗಿಸುವುದು. ಮಸೂದೆ ಜಾರಿಗೆ ಬಂದ ಬಳಿಕ, ಮನೆ ಕೆಲಸಗಾರರು – ಅಡುಗೆ ಮಾಡುವವರು, ಸೇವಕಿಯರು, ಚಾಲಕರು, ದಾದಿಯರು ಮುಂತಾದವರು ಸರ್ಕಾರದ ಬಳಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಮನೆ ಕೆಲಸಗಾರರನ್ನು ನೇಮಿಸುವವರು, ಮಸೂದೆಯಡಿ ಸ್ಥಾಪಿಸಲ್ಪಡುವ ಕಲ್ಯಾಣ ನಿಧಿಗೆ ವೇತನದ ಶೇ. 5ರಷ್ಟು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಗೃಹ ಕೆಲಸದ ಕಾರ್ಮಿಕರಿಗೂ ವೇತನ ಭದ್ರತೆ, ಕೆಲಸದ ಸಮಯ ಹಾಗೂ ಹಕ್ಕು-ಹೊಂದಾಣಿಕೆಯ ಚೌಕಟ್ಟು ರೂಪಿಸಲ್ಪಡಲಿದೆ.

ವರದಿಗಳ ಪ್ರಕಾರ, ಈ ಮಸೂದೆ ಗೃಹ ಕಾರ್ಮಿಕರ ಹಕ್ಕು ರಕ್ಷಣೆಗೆ ಸಮಗ್ರ ಮಾರ್ಗಸೂಚಿ ನೀಡಲಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಲಾಗಿದೆ. ಗೃಹ ಕೆಲಸಗಾರರಿಗಾಗಿ ವಿಶೇಷ ವೆಬ್ಸೈಟ್ ಆರಂಭಿಸಲಾಗಲಿದ್ದು, ಕೆಲಸಕ್ಕೆ ಸೇರಿದ 30 ದಿನಗಳ ಒಳಗಾಗಿ ನೋಂದಣಿ ಕಡ್ಡಾಯವಾಗಿರುತ್ತದೆ. ಇದರಿಂದ ಗೃಹ ಕಾರ್ಮಿಕರ ಗುರುತು ಹಾಗೂ ಹಕ್ಕು ರಕ್ಷಣೆಗೆ ಸ್ಪಷ್ಟ ವ್ಯವಸ್ಥೆ ದೊರೆಯಲಿದೆ.

ನೋಂದಾಯಿತ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನದ ಹಕ್ಕು ಸಿಗುವುದರ ಜೊತೆಗೆ, ಓವರ್ ಟೈಂ ಭತ್ಯೆ, ಮಾತೃತ್ವ ಸೌಲಭ್ಯ, ಸಾಪ್ತಾಹಿಕ ರಜೆ, ವೈದ್ಯಕೀಯ ಮರುಪಾವತಿ, ಶಿಕ್ಷಣ ಬೆಂಬಲ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುವ ಹಕ್ಕು ಬರಲಿದೆ. ಜೊತೆಗೆ ಕೆಲಸದ ವೇಳೆ ಗಾಯವಾದಲ್ಲಿ ಪರಿಹಾರವನ್ನು ಕೂಡ ಪಡೆಯಲು ಅರ್ಹರಾಗಿರುತ್ತಾರೆ. ಈ ಮೂಲಕ ಅಸಂಘಟಿತ ವಲಯದ ಗೃಹ ಕಾರ್ಮಿಕರಿಗೆ ನೈಜ ಅರ್ಥದಲ್ಲಿ ಸಾಮಾಜಿಕ ಭದ್ರತೆ ಲಭ್ಯವಾಗಲಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author