Tuesday, October 14, 2025

Latest Posts

SC ST ಬಡವಾಣೆಗಳಿಗೆ 5,000 ತಿಮ್ಮಪ್ಪನ ದೇವಸ್ಥಾನ! ಸಿಎಂ ನಾಯ್ಡು ಸೂಚನೆ

- Advertisement -

ಹಿಂದುಳಿದ ವರ್ಗಗಳ ಮತಾಂತರ ತಡೆಯಲು ಹಾಗೂ ಹಿಂದೂಗಳಲ್ಲಿ ಏಕತೆ ಬಲಪಡಿಸಲು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಿರುಮಲ ತಿರುಪತಿ ದೇವಸ್ಥಾನಕ್ಕೆ ವಿಶೇಷ ನಿರ್ದೇಶನ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ವೆಂಕಟೇಶ್ವರ ಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲು ಅವರು ಸೂಚಿಸಿದ್ದಾರೆ.

ಕುಟುಂಬ ಸಮೇತರಾಗಿ ತಿರುಮಲಕ್ಕೆ ಭೇಟಿ ನೀಡಿದ ನಾಯ್ಡು, ರಾಜ್ಯದ ಜೊತೆಗೆ ಇತರೆ ರಾಜ್ಯಗಳಲ್ಲಿಯೂ ಹಾಗೂ ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲೂ ಬಾಲಾಜಿ ದೇವಾಲಯಗಳನ್ನು ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ಘೋಷಿಸಿದರು. ತಿರುಮಲದ ಪಾವಿತ್ರ್ಯತೆಯನ್ನು ಕಾಪಾಡುವುದು ಮತ್ತು ವಿಶ್ವಾದ್ಯಂತದ ಭಕ್ತರಿಗೆ ಸುಗಮ ದರ್ಶನ ಸಿಗುವಂತೆ ಮಾಡುವುದು ತಮ್ಮ ಉದ್ದೇಶ ಎಂದು ಅವರು ಹೇಳಿದರು.

ನಾಯ್ಡು ಅವರ ಈ ನಿರ್ಧಾರವನ್ನು ಮಿತ್ರಪಕ್ಷ ಬಿಜೆಪಿ ಸ್ವಾಗತಿಸಿದೆ. ಬಿಜೆಪಿ ನಾಯಕಿ ಎಸ್‌.ಯಾಮಿನಿ ಶರ್ಮಾ ಅವರು, ಜಗನ್ ಮೋಹನ್ ರೆಡ್ಡಿ ಆಡಳಿತದಲ್ಲಿ ಅನೇಕ ಚರ್ಚುಗಳು ನಿರ್ಮಾಣವಾಗಿದ್ದು, ಹೆಚ್ಚಿನ ಮತಾಂತರಗಳು ವಿಶೇಷವಾಗಿ ಎಸ್‌ಸಿ ಮತ್ತು ಎಸ್ಟಿ ಸಮುದಾಯಗಳಲ್ಲಿ ನಡೆದಿರುವುದನ್ನು ಆರೋಪಿಸಿದರು. ಈ ಹಿನ್ನಲೆಯಲ್ಲಿ ಬಾಲಾಜಿ ದೇವಸ್ಥಾನಗಳ ನಿರ್ಮಾಣ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆದರೆ, ಟಿಟಿಡಿ ಯೋಜನೆಯನ್ನು ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಜಗನ್‌ರ ಸಹೋದರಿ ವೈ.ಎಸ್. ಶರ್ಮಿಳಾ ಟೀಕಿಸಿದ್ದಾರೆ. ನಾಯ್ಡು RSS ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದುಳಿದವರ ನಿಜವಾದ ಏಳ್ಗೆ ಬಯಸುವುದಾದರೆ ಟಿಟಿಡಿ ನಿಧಿಯನ್ನು ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಿ ಎಂದು ಆಗ್ರಹಿಸಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss