ಇತ್ತೀಚೆಗೆ ಧರ್ಮಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ಯೂಟ್ಯೂಬರ್, ಟಿವಿ ಚಾನೆಲ್ ವರದಿಗಾರರ ಮೇಲೆ ಹಲ್ಲೆ ನಡೆದಿತ್ತು. ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಮಾರಣಾಂತಿಕ ದಾಳಿ ಮಾಡಲಾಗಿತ್ತು. ಈ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 6 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ಧರ್ಮಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪಾಂಗಳ ಕ್ರಾಸ್ ಬಳಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದರು. ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಯಿತು.
ಧರ್ಮಸ್ಥಳದ ಗಲಾಟೆ ಕೇಸ್‌ಗೆ ಸಂಬಂಧಪಟ್ಟಂತೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. 27 ಜನರ ವಿರುದ್ಧ ದೂರು ದಾಖಲು ಮಾಡಿಕೊಂಡು ಬಳಿಕ ಹುಡುಕಾಟ ನಡೆಸಲಾಗಿತ್ತು.
ಧರ್ಮಸ್ಥಳದಲ್ಲಿ ಗಲಾಟೆಗೆ ಕಾರಣರಾದ 6 ಜನರನ್ನು ಅರೆಸ್ಟ್ ಮಾಡಲಾಗಿದೆ. ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತರಾಗಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ, ಅನಾಮಿಕ ತೋರಿದ ಸ್ಥಳದಲ್ಲಿ ವಿಶೇಷ ತನಿಖಾ ತಂಡ (SIT) ಶೋಧ ಕಾರ್ಯ ನಡೆಸುತ್ತಿದೆ.
ಧರ್ಮಸ್ಥಳದ ಪ್ರಕರಣ ಸದ್ಯ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಎಸ್‌ಐಟಿ ತನಿಖೆ ಸ್ವಾಗತಾರ್ಹವಾದರೂ, ರಾಜ್ಯ ಸರ್ಕಾರ ತನಿಖೆಯ ದಿಕ್ಕು ತಪ್ಪಿಸಲಿದೆ. ಕಾಂಗ್ರೆಸ್ ಸರ್ಕಾರ ತನಗೆ ಒಪ್ಪದ ಸತ್ಯವನ್ನು ಮುಚ್ಚಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.