ಮುಂಬೈನ 20 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮುಂಬೈನ ತಾರ್ಡಿಯೋ ಪ್ರದೇಶದ, ಗೋವಾಲಿಯಾ ಟ್ಯಾಂಕ್ ಬಳಿ ಇರುವ , ಗಾಂಧಿ ಆಸ್ಪತ್ರೆ ಎದುರಿನ, ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಸಂಭವಿಸಿದ, ಅಗ್ನಿ ಅವಘಡದಲ್ಲಿ 15 ಜನರು ಗಾಯಗೊಂಡಿದ್ದರು, ಅದರಲ್ಲಿ ಬೆಳಿಗ್ಗೆ 3 ಜನ ಸಾವನ್ನಪ್ಪಿದ್ದರು. ಉಳಿದವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇನ್ನೂ ಮೂವರು ಚಿಕಿತ್ಸೆಗೆ ಸ್ಪಂದಿಸದೇ, ಸಾವನ್ನಪ್ಪಿದ್ದಾರೆ. ಒಟ್ಟು ಆರು ಜನ ಈ ಅಘಡದಲ್ಲಿ ಮೃತ ಪಟ್ಟಿದ್ದಾರೆ.
ಗಾಯಗೊಂಡವರಲ್ಲಿ 6 ಜನ ವೃದ್ಧರಿದ್ದು, ಅವರಿಗೆಲ್ಲ ಆಸ್ಪತ್ರೆಯಲ್ಲಿ ಆಮ್ಲಜನಕ ಅವಶ್ಯಕತೆ ಇದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಾಯಾಳುಗಳನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ನಾಲ್ವರು ನೇರ್ ಆಸ್ಪತ್ರೆಯಲ್ಲಿ ತೀರಿಹೋದರೆ, ಒಬ್ಬರು ಭಾಟಿಯಾ ಆಸ್ಪತ್ರೆಯಲ್ಲಿ, ಮತ್ತೊಬ್ಬರು ಕಸ್ತೂರಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇನ್ನು ಇಂಥ ಕಹಿ ಘಟನೆಯಲ್ಲಿಯೂ ರಾಜಕೀಯವನ್ನು ಹೊತ್ತು ತಂದಿರುವ ಬಿಜೆಪಿ ನಾಯಕಿ, ಪ್ರೀತಿ ಗಾಂಧಿ, ಘಟನೆಯ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಂದಿನಂತೆ ಕ್ಷಮಿಸಲಾಗುತ್ತದೆ. ಮತ್ತು ಜೀವನವು ಸಾಗುತ್ತದೆ. ಆದ್ರೆ ಮುಂಬೈನಲ್ಲಿ ಹೊಣೆಗಾರಿಕೆಯಿರುವ ಪಕ್ಷದ ಅಗತ್ಯವಿದೆ. ಈ ಘಟನೆಯಿಂದ ಬೇಸರವಾಗಿದೆ ಎಂದು ಬರೆದುಕೊಂಡಿದ್ದಾರೆ.




