ಕರ್ನಾಟಕದಲ್ಲಿ ಅದರಲ್ಲೂ ಹಾಸನದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹೃದಯಾಘಾತ ಸಾವಿನ ಸರಣಿ ಮುಂದುವರಿದೆ. ನಿಂತಲ್ಲೇ ಕುಳಿತಲ್ಲೇ, ಕೆಲಸ ಕಾರ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಅದರಂತೆ ಇಂದು ಒಂದೇ ದಿನ ರಾಜ್ಯದಲ್ಲಿ ಆರು ಮಂದಿ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿದ್ದಾರೆ. ಆರು ಮಂದಿ ಪೈಕಿ ಬಹುತೇಕರು 45 ವರ್ಷದೊಳಗಿನವರು ಎನ್ನುವುದು ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ.
ಬೆಂಗಳೂರಿನ 46 ವರ್ಷದ ಬಸವರಾಜ ಎನ್ನುವವರು ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ಹೋಗಿದ್ರು. ಈ ವೇಳೆ ಖುಷಿಯಿಂದ ಮಾರಿಕಣ್ಣು ಹೋರಿ ಮ್ಯಾಲೆ ಹಾಡಿಗೆ ನೃತ್ಯ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ದಾವಣಗೆರೆ ಶಕ್ತಿ ನಗರದ ನಿವಾಸಿ 40 ವರ್ಷದ ಅನಿಲ್ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇನ್ನು ಕಳೆದ ಮೂರು ತಿಂಗಳಲ್ಲಿ ದಾವಣಗೆರೆಯಲ್ಲಿ ಹೃದಯಾಘಾತಕ್ಕೆ ಮೃತಪಟ್ಟವರ ಸಂಖ್ಯೆ 80ರ ಗಡಿ ದಾಟಿರುವುದು ಆತಂಕ ಹೆಚ್ಚಿಸಿದೆ.
ಮೈಸೂರಿನಲ್ಲಿಂದು ಇಬ್ಬರು ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ಟಿ.ನರಸೀಪುರ ತಾಲೂಕು ಕಚೇರಿಯಲ್ಲಿ ಎಸ್ಡಿಎ ಆಗಿದ್ದ 44 ವರ್ಷದ ಅರುಣ್, ಮೈಸೂರಿನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ಟೀ.ನರಸೀಪುರ ಗುಂಜಾನರಸಿಂಹಸ್ವಾಮಿ ದೇಗುಲದ ಪ್ರಧಾನ ಅರ್ಚಕ 66 ವರ್ಷದ ಸಂಪತ್ ಕುಮಾರ್ ಸಹ, ತಡರಾತ್ರಿ ಹೃದಯಾಘಾತದಿಂದ ಬಲಿಯಾಗಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ನಿವಾಸಿ 42 ವರ್ಷದ ಶೋಭಾ ವಡಕಣ್ಣವರ ಎನ್ನುವರಿಗೆ ನಿನ್ನೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ 50 ವರ್ಷದ ದಾಕ್ಷಾಯಿಣಿ ಎನ್ನುವರು ವಾರದ ಹಿಂದೆ ದಾಕ್ಷಾಯಿಣಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ರು ಆದರೆ ಇಂದು ಜಿಲ್ಲಾಸ್ಪತ್ರೆಯ ವಾರ್ಡ್ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಾಕ್ಷಾಯಿಣಿ ಸಾವನ್ನು ಕಣ್ಣಾರೆ ಕಂಡ ರೋಗಿಗಳು, ಸಂಬಂಧಿಕರಿಗೆ ಶಾಕ್ ಆಗಿದ್ದಾರೆ.
ಈ ರೀತಿಯಾಗಿ ಇಂದು ಸಹ ಹೃದಯಾಘಾತಕ್ಕೆ ಆರು ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ