ಕಲುಷಿತ ನೀರಿನ ದುರಂತ ಮುಗೀತು ಅನ್ನೋವಾಗ್ಲೆ, ರಾಯಚೂರಿನಲ್ಲಿ ಕಲುಷಿತ ನೀರು ಮತ್ತೊಂದು ಬಲಿ ಪಡೆದಿದೆ. ವಿಷ ಜಲಕ್ಕೆ ಪ್ರಾಣ ಬಿಟ್ಟಿರುವವರ ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ಇನ್ನೂ ರಾಯಚೂರಿಗರ ಎದೆಯಲ್ಲಿ ಢವ ಢವ ಜೀವಂತವಾಗಿದೆ.
ಈಗಾಗಲೇ ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು ಐವರು ಪ್ರಾಣ ಬಿಟ್ಟಿದ್ದರು, ನಿನ್ನೆ ಇದೇ ವಿಷ ಜಲ ಮತ್ತೊಬ್ಬ ವ್ಯಕ್ತಿಯ ಉಸಿರು ನಿಲ್ಲಿಸಿದೆ. ರಾಯಚೂರು ನಗರದ ಮಂಗಳವಾರ ಪೇಟೆಯ ವಾರ್ಡ್ 12 ನಿವಾಸಿ, 55 ವರ್ಷದ ನಯೀಮ್ ಎಂಬುವವರು ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡ್ತಿದ್ದ ನಯಿಮುದ್ದಿನ್ ಹಾಗೂ ಕುಟುಂಬಸ್ಥರು ನಗರಸಭೆಯಿಂದ ಸರಬರಾಜು ಆಗೊ ರಾಂಪೂರ ಘಟಕದ ನೀರನ್ನೆ ಕುಡಿಯುತ್ತಿದ್ದರು. ಕಲುಷಿತ ನೀರು ಕುಡಿದ ಹಿನ್ನೆಲೆ ನಯಿಮುದ್ದಿನ್ ವಾಂತಿ ಹಾಗೂ ಭೇದಿಯಿಂದ ನರಳಾಟ ಶುರುಮಾಡಿದ್ರು. ಕೊನೆಗೆ ಮೇ 28 ಕ್ಕೆ ನಗರದ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದ್ದು, ಸುಮಾರು 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 7 ರಂದು ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವಾಂತಿ ಹಾಗೂ ಭೇದಿಯಿಂದಾಗಿ ಕಿಡ್ನಿ ಮೇಲೆ ಪರಿಣಾಮ ಬೀರಿದ ಹಿನ್ನೆಲೆ ನಿನ್ನೆ ನಯಿಮುದ್ದಿನ್ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇತ್ತ ಕಲುಷಿತ ನೀರಿನ ಸರಣಿ ದುರಂತದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಕಲುಷಿತ ನೀರಿನ ದುರಂತ ಶುರುವಾದ 15 ದಿನಗಳ ಬಳಿಕ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ರಾಯಚೂರು ನಗರಕ್ಕೆ ಇಂದು ಭೇಟಿ ನೀಡಿದ್ದರು. ರಾಯಚೂರು ನಗರಕ್ಕೆ ನೀರು ಕಲ್ಪಿಸೊ ರಾಂಪೂರ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಜೊತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅಲ್ಲಿನ ನೀರನ್ನು ಕುಡಿದರು. ಬಳಿಕ ಕಲುಷಿತ ನೀರಿನಿಂದ ಮೃತಪಟ್ಟವರ ಪೈಕಿ ಮಲ್ಲಮ್ಮ, ಅಬ್ದುಲ್ ಗಫೂರ್ ಹಾಗೂ ಮೊಹಮ್ಮದ್ ನೂರ್ ಕುಟುಂಬಕ್ಕೆ 10 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಕಳೆದ ಮೂರು ವರ್ಷಗಳಿಂದ ರಾಂಪೂರ ಜಲ ಶುದ್ಧೀಕರಣ ಘಟಕದಲ್ಲಿ ಲ್ಯಾಬ್ ಬಂದ್ ಮಾಡಲಾಗಿತ್ತು. ಸಮರ್ಪಕವಾಗಿ ಘಟಕವನ್ನು ಮೆಂಟೈನ್ ಮಾಡದ ಹಿನ್ನೆಲೆ 14 ಅಡಿಯಷ್ಟು ಕೆಸರನ್ನು ಸ್ವಚ್ಛಗೊಳಿಸಲಾಗಿದೆ. ಈಗನ ನಗರಸಭೆ ಈಗಷ್ಟೆ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಅವು ಮೆಂಟೈನ್ ಆಗಿರ್ಲಿಲ್ಲ ಅಂತ, ಯಾರು ಮಾಡಿದ್ರು…ಯಾಕೆ ಮಾಡಿದ್ರು ಅಂತ ಪರೋಕ್ಷವಾಗಿ ಈ ಹಿಂದೆ ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು. ಮೃತರಿಗೆ ಪರಿಹಾರ ಕೊಡಬಹುದು, ಆದ್ರೆ ಬದುಕಿಸಲಾಗಲ್ಲ. ಇನ್ಮುಂದೆ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದ ಬಳಿಕವೇ ನಗರಕ್ಕೆ ನೀರು ಬಿಡಲಾಗುತ್ತದೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ಇತ್ತ ಕಲುಷಿತ ನೀರಿನಿಂದ ಬಳಲುತ್ತಿರೋ ಇನ್ನೂ ಅನೇಕ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಆಸ್ಪತ್ರೆ ಗೋಜಿಗೆ ಹೋಗದೇ ಮನೆಯಲ್ಲೇ ಔಷಧಿ ಪಡೆಯುತ್ತಿದ್ದಾರೆ. ಇನ್ನಾದರೂ ನಗರಸಭೆ ಎಚ್ಚೆತ್ತುಕೊಂಡು ಮನೆ ಮನೆಗೆ ಶುದ್ಧಿಕರಿಸಿದ ನೀರನ್ನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಅನಿಲ್‌ಕುಮಾರ್, ಕರ್ನಾಟಕ ಟಿವಿ, ರಾಯಚೂರು